ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಸಂಭವಿಸಬಹುದಾದ ಕಣ್ಣಿಗೆ ಸಂಬಂಧಪಟ್ಟ ಅವಘಡಗಳಿಗೆ ಚಿಕಿತ್ಸೆ ನೀಡಲು ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ಮಿಂಟೋ ಕಣ್ಣಾಸ್ಪತ್ರೆ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ. ಸುರಕ್ಷಿತ ದೀಪಾವಳಿ ಆಚರಣೆ, ಮುನ್ನೆಚ್ಚರಿಕೆ ಮತ್ತು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ಆಸ್ಪತ್ರೆಯ ನಿರ್ದೇಶಕರಾದ ಡಾ. ಸುಜಾತ ರಾಥೋಡ್, ಪಟಾಕಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಪೈಕಿ ಶೇ 40 ರಷ್ಟು 14 ವಯೋಮಿತಿಯ ಮಕ್ಕಳಾಗಿದ್ದು, ಮೂರು ಪಟ್ಟು ಗಂಡು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಳಾಗುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಹಚ್ಚಿನ ಅನಾಹುತವಾಗುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ ಎಂದರು.
![request to burn firecrackers carefully on Diwali](https://etvbharatimages.akamaized.net/etvbharat/prod-images/kn-bng-03-firework-accident-hospital-is-ready-script-7208083_22102022174809_2210f_1666441089_830.jpg)
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ವಾರ ದಿನದ 24 ಗಂಟೆಗಳ ಕಾಲ ಆಸ್ಪತ್ರೆಯ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲಾಗಿದೆ. ಚಿಕಿತ್ಸೆಗಾಗಿ ಅಗತ್ಯ ಆಧುನಿಕ ಸಲಹಕರಣೆ ಮತ್ತು ಸೂಕ್ತ ಪ್ರಮಾಣದ ದಾಸ್ತಾನು ಮಾಡಲಾಗಿದೆ. ಮಿಂಟೋ ಕಣ್ಣಾಸ್ಪತ್ರೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ವ್ಯವಸ್ಥೆ ಇದ್ದು, ವೈದ್ಯರು, ಪಿ.ಜಿ. ವಿದ್ಯಾರ್ಥಿಗಳು ಒಳಗೊಂಡಂತೆ ಸುಮಾರು 100 ಮಂದಿ ಚಿಕಿತ್ಸೆ ನೀಡಲು ಸಜ್ಜಾಗಿದ್ದಾರೆ. ಒಂದು ವಾರ ಯಾವುದೇ ಸಿಬ್ಬಂದಿಗೆ ರಜೆ ನೀಡುತ್ತಿಲ್ಲ ಎಂದು ಹೇಳಿದರು.
![request to burn firecrackers carefully on Diwali](https://etvbharatimages.akamaized.net/etvbharat/prod-images/kn-bng-03-firework-accident-hospital-is-ready-script-7208083_22102022174809_2210f_1666441089_626.jpg)
ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಳ್ಳುವ, ಅಂಗವಿಕಲರಾಗುವವರಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಹೀಗಾಗಿ ದರಂತಕ್ಕೆ ಆಸ್ಪದ ಬೇಡ. ಈ ಬಾರಿ ವಿಷಕಾರಿ ಹೊಗೆ ಇಲ್ಲದ ಪರಿಸರ ಸ್ನೇಹಿ, ಸ್ವಚ್ಛ ದೀಪಾವಳಿಯನ್ನು ಆಚರಿಸಲು ಪ್ರತಿಜ್ಞೆ ಕೈಗೊಳ್ಳೋಣ ಎಂದು ಕರೆ ನೀಡಿದರು.
ಪಟಾಕಿ ಹಚ್ಚುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?: ಹಸಿರು ಪಟಾಕಿ ಸಿಡಿಸುವಾಗಲೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕಾಗುತ್ತದೆ. ಪಟಾಕಿ ಕಣ್ಣಿಗೆ ಸಿಡಿದರೆ ತಕ್ಷಣವೇ ಕಣ್ಣು ಉಜ್ಜಬಾರದು. ಕಣ್ಣಿನ ಸೂಕ್ಷ್ಮ ಭಾಗಕ್ಕೆ ಪಟಾಕಿ ರಾಸಾಯನಿಕಗಳು ಹಾನಿ ಉಂಟು ಮಾಡಬಹುದು. ಹಾಗಾಗಿ ಶುದ್ಧ ನೀರಿನಿಂದ ಮೊದಲು ಕಣ್ಣುಗಳನ್ನು ತೊಳೆದು ಹತ್ತಿಬಟ್ಟೆಯನ್ನು ಕಣ್ಣಿನ ಮೇಲಿಟ್ಟು ಆಸ್ಪತ್ರೆಗೆ ಕರೆತರಬೇಕು ಎಂದರು.
ಪಟಾಕಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಎಚ್ಚರಿಕೆಯಿಂದ ನಿಭಾಯಿಸಬೇಕು. ವಾಹನಗಳಿಂದ ದೂರ ಪಟಾಕಿ ಹೊತ್ತಿಸಿದರೆ ವಾಹನಗಳು ಪಟಾಕಿ ಕಿಡಿಗೆ ಆಹುತಿಯಾಗುವುದನ್ನು ತಪ್ಪಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ ದುರಂತಗಳನ್ನು ತಪ್ಪಿಸಿದಂತಾಗುತ್ತದೆ. ಪಟಾಕಿ ಹಚ್ಚುವಾಗ ಪ್ರತಿಯೊಬ್ಬರೂ ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ ಎಂದು ಡಾ.ಸುಜಾತ ರಾಥೋಡ್ ವೈದ್ಯರು ಸಲಹೆ ನೀಡಿದ್ದಾರೆ.
ಸಹಾಯವಾಣಿ : ಪಟಾಕಿಯಿಂದ ಹಾನಿಯಾದರೆ ಚಿಕಿತ್ಸೆಗಾಗಿ ಸಂಪರ್ಕಿಸಬೇಕಾದ ಸಂಖ್ಯೆಗಳು 9481740137, 9480832430.
ಇದನ್ನೂ ಓದಿ : ದೀಪಾವಳಿಗೆ ಭರ್ಜರಿ ಸಿದ್ಧತೆ: ಬಿಹಾರದಲ್ಲಿ ನೀರಿನ ದೀಪಗಳಿಗೆ ಭಾರಿ ಬೇಡಿಕೆ