ಬೆಂಗಳೂರು: ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಆರ್ಟಿಇ ಮರುಪಾವತಿ ಶುಲ್ಕಕ್ಕೆ ಪೂರಕವಾಗಿ 1500 ಕೋಟಿ ಹಣವನ್ನ ಬಜೆಟ್‌ನಲ್ಲಿ ಮೀಸಲಿಡುವಂತೆ ಬೇಡಿಕೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ 6,50, 000 ವಿದ್ಯಾರ್ಥಿಗಳಿಗೆ ಹಿಂದಿನ ಶೈಕ್ಷಣಿಕ ವರ್ಷದ ಹಣ ಮರುಪಾವತಿ ಮಾಡದೇ ಇರುವುದನ್ನು ಪರಿಗಣಿಸಿ ರಾಜ್ಯದ ಉದ್ದಗಲಕ್ಕೂ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಬಹುತೇಕ ರಾಜ್ಯ ಪಠ್ಯಕ್ರಮದ ಶಾಲೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ಸರಾಸರಿ ಸುಮಾರು ₹1,300 ಕೋಟಿಗೂ ಹೆಚ್ಚು ಆರ್ಟಿಇ ಮರುಪಾವತಿ ಬಾಕಿ ಉಳಿದಿದೆ. ಕಳೆದ 2 ವರ್ಷಗಳಿಂದ ಪ್ರತೀ ವರ್ಷ 500 ಕೋಟಿ ರೂ.ಗಳನ್ನು ಆಯಾ ವರ್ಷದ ಮರುಪಾವತಿಗಾಗಿ ಮೀಸಲಿಡಲಾಗಿದೆ. ಈ ಮೊತ್ತ ಸಾಲದಿರುವುದರಿಂದ ಈ ಬಾರಿ ಕಳೆದ ವರ್ಷ ಮತ್ತು ಈ ವರ್ಷ ಸೇರಿ ಒಟ್ಟು ₹2000 ಕೋಟಿಗೂ ಹೆಚ್ಚು ಅಗತ್ಯ ಇರುವುದರಿಂದ, ಈ ವರ್ಷದ ಬಜೆಟ್‌ನಲ್ಲಿ ವಿಶೇಷ ಆರ್ಟಿಇ ಮರುಪಾವತಿ ಶುಲ್ಕಕ್ಕೆ ಪ್ರತ್ಯೇಕ ಹಣ ನೀಡಬೇಕೆಂದು ಕ್ಯಾಮ್ಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯದಾದ್ಯಂತ 93ಕ್ಕೂ ಅಧಿಕ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ರಾಜ್ಯ ಪಠ್ಯಕ್ರಮದ ಬೋಧನೆ ಅಳವಿಡಿಸಿಕೊಂಡಿವೆ. ಈ ಶಾಲೆಗಳು ಬಡವರು, ಮಧ್ಯಮ ವರ್ಗದವರು, ದಲಿತರು, ಕೂಲಿಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇದರಲ್ಲಿ ಬಹುತೇಕರು ಶಾಲಾ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಸರ್ಕಾರದಿಂದ ಬರಬೇಕಾದ ಶೇ. 25% ಮಕ್ಕಳ ಶುಲ್ಕವೂ ಬಂದಿಲ್ಲ. ಶಿಕ್ಷಣ ಸಂಸ್ಥೆಗೆ ಹೆಚ್ಚು ಆರ್ಥಿಕ ಸಂಕಷ್ಟ ಎದುರಾಗಿರುವುದನ್ನು ಪರಿಗಣಿಸಿ ಹೆಚ್ಚುವರಿ ಹಣ ಮಂಜೂರು ಮಾಡಬೇಕಾಗಿ ಮನವಿ ಸಲ್ಲಿಸಿದ್ದಾರೆ.