ಬೆಂಗಳೂರು: ಕೆಲ ದಿನಗಳಲ್ಲೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಜ. 26ರ ಗಣರಾಜ್ಯೋತ್ಸವಕ್ಕೆ ಪ್ರತೀ ವರ್ಷ ಬೆಂಗಳೂರಿನ ಲಾಲ್‌ಬಾಗ್ ಗಾಜಿನ ಮನೆ ಫಲಪುಷ್ಪಗಳಿಂದ ವಿಭಿನ್ನವಾಗಿ ಅಲಂಕಾರಗೊಳ್ಳುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಲಾಲ್‌ಬಾಗ್ ಗಣರಾಜ್ಯೋತ್ಸವ ದಿನದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಮುಂದಾಗಿದೆ. ಈ ಬಾರಿ ರಾಜಧಾನಿ ಬೆಂಗಳೂರು ನಗರದ ಹುಟ್ಟು, ಬೆಳೆದ ಬಂದ ಹಾದಿಯ ಕುರಿತಂತೆ ನಗರದ ಇತಿಹಾಸವನ್ನು ಬಿಂಬಿಸುವ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
ಜ. 19 ರಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಸರ್ಕಾರದ ಹಿರಿಯ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಬೆಂಗಳೂರು ಇತಿಹಾಸ ಬಿಂಬಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಈಗಿನ ಯುವ ಜನತೆಗೆ ಅರ್ಥೈಸಬೇಕಾಗಿದೆ. ಇದಕ್ಕಾಗಿ ಇದೇ ವಿಷಯವನ್ನು ಪ್ರಸಕ್ತ ವರ್ಷದ ವಿಷಯವಸ್ತುವನ್ನಾಗಿ ನಿರ್ಧರಿಸಲಾಗಿದೆ ಅಧಿಕಾರಿಗಳು ವಿವರಿಸಿದರು.
ಮೈಸೂರು ಉದ್ಯಾನ ಕಲಾಸಂಘ ಕೈ ಬಿಟ್ಟು ಪ್ರದರ್ಶನ: ಸುಮಾರು 100 ವರ್ಷಗಳ ಇತಿಹಾಸವಿರುವ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಸಹಭಾಗಿತ್ವದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಮೈಸೂರು ಉದ್ಯಾನ ಕಲಾ ಸಂಘ ಪ್ರದರ್ಶನಕ್ಕೆ ಹಣಕಾಸು ನೆರವು ಒದಗಿಸುತ್ತಿತ್ತು. ಅದರಲ್ಲಿ ಬಂದ ಲಾಭಾಂಶದಲ್ಲಿ ಇಲಾಖೆ ಮತ್ತು ಸಂಘ ಹಂಚಿಕೊಳ್ಳುತ್ತಿತ್ತು. ಪ್ರಸಕ್ತ ವರ್ಷ ಸರ್ಕಾರವೇ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಮುಂದಾಗಿದೆ ಎಂದು ಮೈಸೂರು ಉದ್ಯಾನ ಕಲಾ ಸಂಘದ ಪದಾಧಿಕಾರಿಯೊಬ್ಬರು ಈಟಿವಿ ಭಾರತ್ಗೆ ವಿವರಿಸಿದ್ದಾರೆ.
ಕೊರೊನಾ ಕರಿ ನೆರಳು: ಫಲಪುಷ್ಪ ಪ್ರದರ್ಶನಕ್ಕೆ ದಿನಾಂಕ ಹತ್ತಿರವಾಗುತ್ತದ್ದಂತೆ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಸೋಂಕು ಹೆಚ್ಚಾದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಪ್ರದರ್ಶನದಲ್ಲಿ ಏನೇನಿರಲಿದೆ: ಮೊಘಲರು ಬೆಂಗಳೂರನ್ನು 1689 ರಲ್ಲಿ ಮೈಸೂರಿನ ಆಡಳಿತಗಾರ ಚಿಕ್ಕ ದೇವರಾಜ ಒಡೆಯರ್ ಅವರಿಗೆ ಮೂರು ಲಕ್ಷಕ್ಕೆ ಮಾರಿದ್ದರು. 1759 ರಲ್ಲಿ ಒಡೆಯರ್ ವಂಶಸ್ಥರಾದ ಎರಡನೇ ಕೃಷ್ಣರಾಜ ಒಡೆಯರ್ ಆವರು, ಮೈಸೂರು ಸೇನೆಯ ಮಹಾದಂಡನಾಯಕನಾದ ಹೈದರ್ ಅಲಿಯನ್ನು ಬೆಂಗಳೂರಿನ ವೈಯಕ್ತಿಕ ಜಹಗೀರನಾಗಿ ನೇಮಿಸಿದರು.
1789 ರಲ್ಲಿ ಹೈದರ್ ಅಲಿ ಮರಣ ಹೊಂದಿದಾಗ ಅವನ ಮಗ ಟಿಪ್ಪು ಸುಲ್ತಾನ್ ದುರ್ಬಲ ಒಡೆಯರ್ ಅನ್ನು ಪದಚ್ಯುತಗೊಳಿಸಿದರು ಹಾಗೂ ತನ್ನನ್ನು ತಾನು ಸುಲ್ತಾನ್ ಎಂದು ಘೋಷಿಸಿಕೊಂಡರು. ಮೈಸೂರು ಸೇನೆ ಮತ್ತು ಬ್ರಿಟಿಷರ ನಡುವೆ ನಡೆದ ಆಂಗ್ಲೋ ಮೈಸೂರು ಯುದ್ಧದ ಬಳಿಕ ಲಾರ್ಡ್ ಕಾರ್ನ್‌ವಾಲಿಸ್ ನೇತೃತ್ವದಲ್ಲಿ ಬೆಂಗಳೂರನ್ನು ಬ್ರಿಟಿಷರು ವಶಪಡಿಸಿಕೊಂಡರು. ಬಳಿಕ ಭಾರತ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರ್ಪಡೆಗೊಂಡಿತ್ತು.
ಟಿಪ್ಪು ಸುಲ್ತಾನ್ ನಂತರ ಒಡೆಯರ್ ಮೈಸೂರಿನ ಸಿಂಹಾಸನಕ್ಕೆ ಮರಳಿದರು. ಆಗಸ್ಟ್, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಬೆಂಗಳೂರು ಬ್ರಿಟಿಷ್ ಪೂರ್ವ ಭಾರತದ ಭಾಗವಾಗಿತ್ತು. ಮೈಸೂರು ರಾಜ್ಯದ 'ರೆಸಿಡೆನ್ಸಿ' ಅನ್ನು ಮೊದಲು 1799 ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಗಿತ್ತು. ಈ ಎಲ್ಲ ಅಂಶಗಳು ಪ್ರದರ್ಶನದಲ್ಲಿ ಯುವ ಜನತೆಗೆ ವಿವರಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.
ಅಷ್ಟೇ ಅಲ್ಲದೆ, ಕೆಂಪೇಗೌಡರಿಂದ ನವ ಬೆಂಗಳೂರು ನಿರ್ಮಾಣ, ಸ್ವಾತಂತ್ರ್ಯ ಭಾರತದ ನಂತರ ವಿಧಾನಸೌಧ ನಿರ್ಮಾಣ, ಕರ್ನಾಟಕ ಏಕೀಕರಣ ಸೇರಿದಂತೆ ಎಲ್ಲ ವಿಚಾರಗಳು ಪ್ರದರ್ಶನದಲ್ಲಿ ನೋಡವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: 'ಡಾ.ರಾಜ್ಕುಮಾರ್- ಪುನೀತ್ ರಾಜ್ಕುಮಾರ್ ಅವರಿಗೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಅರ್ಪಣೆ'