ಬೆಂಗಳೂರು: ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಅಭಿವೃದ್ಧಿಗೆ ಕೆಲಸ ಮಾಡ್ತೀನಿ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೇಶ್ವರ್ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಚಿವನಾಗುವ ಆಪೇಕ್ಷೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ. ದೆಹಲಿಗೆ ಹೋಗಬಾರದು ಅಂತೇನಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಯಾರು ಬೇಕಾದರೂ ಹೋಗಬಹುದು, ಸಭೆ ಮಾಡಬಹುದು. ಎಲ್ಲರೂ ಒಟ್ಟಾಗಿ ಸೇರಬಾರದೆಂದು ಅಂತೇನಿಲ್ಲ ಎಂದು ವಿವರಿಸಿದರು.
ನಾನು ದೆಹಲಿಗೆ ಹೋಗುತ್ತೇನೆ: ನಾನು ಯಾವತ್ತು ಮೌನವಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೆಹಲಿಗೆ ಹೋಗುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ದೆಹಲಿಗೆ ಹೋಗ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ರನ್ನು ಅವಕಾಶ ಕೊಡಿ ಅಂತಾ ಕೇಳಿದ್ದೆ. ವರಿಷ್ಠರ ಜೊತೆಗೆ ನಮಗೆ ಯಾವುದು ನೋವಿಲ್ಲ ಎಂದರು.