ಬೆಂಗಳೂರು: ನನ್ನ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ ಅನುದಾನ, ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ನಲ್ಲಿ ಮನೆ ಪಡೆಯಲು ಮತ್ತು ಕಾರಿನಲ್ಲಿ ಒಡಾಡಲು ಅವರೇ ಕಾರಣ. ಅವರು ನಮಗೆ ಜಗದ್ಗುರುಗಳು. ಅವರ ವಿರುದ್ಧ ಮಾತನಾಡಿದ್ರೆ ಅವರ ಮೂರನೇ ಕಣ್ಣಿನ ಜ್ವಾಲೆಯಿಂದ ನಾನು ಭಸ್ಮವಾಗಿಬಿಡುತ್ತೇನೆ ಎಂದು ಸಚಿವ ಯೋಗೀಶ್ವರ್ ಹೆಸರು ಹೇಳದೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ನಮಗೆ ಜಗದ್ಗುರುಗಳಿದ್ದ ಹಾಗೆ. ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಿರುವುದಕ್ಕೆ, ನಾನು ಶಾಸಕನಾಗಿರುವುದಕ್ಕೆ ಹಾಗು ಅಬಕಾರಿ ಸಚಿವನಾಗಿದ್ದೇನೆ ಅಂದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಅಂದರೆ ಅದಕ್ಕೆಲ್ಲ ಆ ಜಗದ್ಗುರುಗಳೇ ಕಾರಣ. ಪಕ್ಷ ಕಟ್ಟುವಲ್ಲಿ ಅವರ ಪಾತ್ರ ಬಹಳಷ್ಟು ದೊಡ್ಡದಿದೆ. ಹೀಗಾಗಿ ಅವರು ತುಂಬಾ ದೊಡ್ಡವರು. ಅವರ ಆಶೀರ್ವಾದದಿಂದ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿದ್ದೇನೆ. ಅವರ ಮೇಲೆ ಟೀಕೆ ಮಾಡಿದರೆ ಅವರ ಮೂರನೇ ದೃಷ್ಟಿ ನನ್ನ ಮೇಲೆ ಬೀಳುತ್ತದೆ. ಅವರು ಮೂರನೇ ಕಣ್ಣು ಬಿಟ್ಟರೆ ನಾನು ಭಸ್ಮವಾಗಿ ಬಿಡುತ್ತೇನೆ. ಅವರನ್ನು ನಾನು ಪರಮಾತ್ಮನ ಸ್ಥಾನದಿಂದ ನೋಡುತ್ತಿದ್ದೇನೆ ಎಂದರು. ಆದರೆ ಚನ್ನಪಟ್ಟಣದಲ್ಲಿ ಯಾಕೆ ಜನ ತಿರಸ್ಕರಿಸಿದರು? ಎಂಬುದರ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
'ಕದ್ದು ಮುಚ್ಚಿ ದೆಹಲಿಗೆ ಹೋಗಲ್ಲ'
ದೆಹಲಿಗೆ ಭೇಟಿ ಕೊಡುತ್ತೇನೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ನಿನ್ನೆ ಅಪ್ತ ಶಾಸಕರೆಲ್ಲ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ನನ್ನ ನಿವಾಸದಲ್ಲೂ ಸಮಾಲೋಚನೆ ನಡೆಸಿದ್ದೇವೆ. ಯಡಿಯೂರಪ್ಪನವರ ಬಗ್ಗೆ ಪದೇ ಪದೇ ಕೆಲವರು ಬಳಕೆ ಮಾಡುತ್ತಿರುವ ಭಾಷೆ ಸರಿಯಲ್ಲ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಮಾಡೋದು ಸರಿಯಲ್ಲ. ವರಿಷ್ಠರನ್ನು ಯಾವ ಸಂದರ್ಭದಲ್ಲಿ ಭೇಟಿಯಾಗಬೇಕು ಎಂಬುದನ್ನು ನಮ್ಮ ಶಾಸಕರೆಲ್ಲ ಸೇರಿ ಚರ್ಚೆ ಮಾಡುತ್ತೇವೆ. ದೆಹಲಿಗೆ ಹೋಗಿ ವರಿಷ್ಠರನ್ನ ಭೇಟಿ ಮಾಡುತ್ತೇವೆ. ಬೇರೆಯವರ ತರಹ ಕದ್ದು ಮುಚ್ಚಿ ದೆಹಲಿಗೆ ಹೋಗೋದಿಲ್ಲ. ನಾಯಕರ ಮನೆಯ ಗೇಟ್ ಮುಟ್ಟಿ ವಾಪಸ್ ಬಂದರಲ್ಲ ಆ ರೀತಿ ಹೋಗೋದಿಲ್ಲ. ವರಿಷ್ಠರ ಹತ್ತಿರ ದಿನಾಂಕ ನಿಗದಿ ಮಾಡಿ ದೆಹಲಿ ಭೇಟಿ ಕೊಡುತ್ತೇವೆ ಎಂದು ರೇಣುಕಾಚಾರ್ಯ ಪರೋಕ್ಷವಾಗಿ ರೆಬೆಲ್ ಟೀಂಗೆ ಟಾಂಗ್ ನೀಡಿದರು.
'ಊಟ-ತಿಂಡಿಗೆ ಸೇರಿದರೆ ಪ್ರತ್ಯೇಕ ಸಭೆ ಅಲ್ಲ'
ಅರುಣ್ ಸಿಂಗ್ ಪ್ರತ್ಯೇಕ ಸಭೆ ನಡೆಸಬಾರದು ಎಂಬ ಸೂಚನೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ನಾನು ಯಾವ ರೆಸಾರ್ಟ್ನಲ್ಲಿ ಹೋಗಿ ಸಭೆ ನಡೆಸುತ್ತಿಲ್ಲ. ರೆಸಾರ್ಟ್ನಲ್ಲಿ ಹೋಟೆಲ್ಗಳಲ್ಲಿ ಸಭೆ ನಡೆಸಿದರೆ ತಪ್ಪು. ಬೆಂಗಳೂರು ಬಂದಾಗ ಅಪ್ತ ಶಾಸಕರು ನಮ್ಮ ಮನೆಯಲ್ಲಿ ಅಥವಾ ಶಾಸಕರ ಭವನದಲ್ಲಿ ಸೇರುತ್ತೇವೆ. ಊಟ ತಿಂಡಿಗೆ ಸೇರುತ್ತೇವೆ. ಸಂಘಟನೆ ಅಥಾವ ನಾಯಕತ್ವದ ವಿರುದ್ಧ ಹೋಗಲ್ಲ ಎಂದರು.
'ಸುಮಲತಾ, ಕುಮಾರ ಸ್ವಾಮಿ ಪರ ವಿರುದ್ಧ ಮಾತನಾಡಲ್ಲ'
ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಸುಮಲತಾ ಪರವಾಗಿಯೂ ಮಾತನಾಡಲ್ಲ. ಕುಮಾರ ಸ್ವಾಮಿಯವರ ವಿರುದ್ಧವೂ ಮಾತನಾಡಲ್ಲ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸಚಿವರಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ, ಮೈಸೂರು ಸಂಸದರಿದ್ದಾರೆ. ಅವರು ಪರಿಶೀಲನೆ ನಡೆಸ್ತಾರೆ. ಅಕ್ರಮವಾಗಿದ್ದರೆ ಕ್ರಮಕೈಗೊಳ್ಳುತ್ತಾರೆ ಎಂದರು.