ಬೆಂಗಳೂರು : ಸಾರ್ವತ್ರಿಕ ಚುನಾವಣೆಗೆ 13 ತಿಂಗಳು ಬಾಕಿಯಿರುವ ಹಿನ್ನೆಲೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿದ್ರೆ ಅನುಕೂಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಸಿಎಂ ಪರಮಾಧಿಕಾರ. ಎರಡು ಬಾರಿ ಸಚಿವರಾದವರೂ ಇದ್ದಾರೆ. ಕೆಲವರು ಎರಡೆರಡು ಖಾತೆ ನಿಭಾಯಿಸುತ್ತಿದ್ದಾರೆ.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಆಗಬೇಕು. ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ದಾವಣಗೆರೆ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲ. ಹಾಗಂತಾ, ನನಗೆ ಕೊಡಿ ಅಂತಾ ಹೇಳ್ತಾಯಿಲ್ಲ, ಬೇರೆಯವರಿಗೇ ಕೊಡಿ ಎಂದು ಆಗ್ರಹಿಸಿದರು.
ಪ್ರಾದೇಶಿಕವಾಗಿ ಸಚಿವ ಸ್ಥಾನ ಸಿಗಬೇಕು. ಹಿರಿಯರು, ಎರಡು ಬಾರಿ ಸಚಿವರಾದವರನ್ನ ಕೈ ಬಿಡುವ ವಿಚಾರವನ್ನ ವರಿಷ್ಠರು ತೀರ್ಮಾನ ಮಾಡ್ತಾರೆ. ಅದಷ್ಟು ಬೇಗ ಸಂಪುಟ ವಿಸ್ತರಣೆ ಆಗಬೇಕು, ಹೊಸಬರಿಗೆ ಅವಕಾಶ ಸಿಗಬೇಕು ಎಂದು ತಿಳಿಸಿದರು.
ಪಂಚರಾಜ್ಯ ಫಲಿತಾಂಶದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಸದ್ಯಕ್ಕೆ ಅಂತಾ ಯಾವುದೇ ಚರ್ಚೆಗಳು ನಡೆದಿಲ್ಲ. ಇದೆಲ್ಲ ಮಾಧ್ಯಮಗಳ ಊಹಾಪೋಹಗಳು ಅಷ್ಟೇ.. ಯಾವ ಶಾಸಕರು ಸಿಎಂ ಬದಲಾವಣೆ ಆಗಬೇಕು ಅಂತಾ ಹೇಳಿದ್ದಾರೆ ತೋರಿಸಿ.
ಅಂತಹ ಯಾವ ಬೆಳವಣಿಗೆಯೂ ನಡೆದಿಲ್ಲ. ಬಿಎಸ್ವೈ ನಂತರ ಸಿಎಂ ಬೊಮ್ಮಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ನಾಯಕತ್ವ ಬದಲಾವಣೆ ವಿಚಾರಕ್ಕೆ ಯಾವ ಸಭೆಯೂ ನಡೆದಿಲ್ಲ. ಸಂಪುಟ ವಿಸ್ತರಣೆ, ಪುನಾರಚನೆ ವಿಚಾರದ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ನಿರ್ಧಾರ ಮಾಡ್ತಾರೆ ಎಂದರು.
ಇದನ್ನೂ ಓದಿ: ನೌಕರರ ಪಿಂಚಣಿ ಪಾವತಿಗೆ ಸಾರಿಗೆ ನಿಗಮಗಳ ವಾಣಿಜ್ಯ ಕಟ್ಟಡ ಅಡಮಾನ : ಸಚಿವ ಶ್ರೀರಾಮುಲು