ಬೆಂಗಳೂರು: ಕೆಲವರು ಎರಡು ಮೂರು ಖಾತೆ ಬೇಕು ಅಂತ ಕುಳಿತಿದ್ದಾರೆ. ಅಂದು ಹಮಾಲಿ ಕೆಲಸ ಮಾಡಿದ್ದು ನಾವು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ, ನಾಯಕತ್ವದ ವಿರುದ್ಧ ನಮ್ಮ ಹೋರಾಟ ಅಲ್ಲ. ಕೆಲವರು ಇಂತದ್ದೇ ಖಾತೆ ಬೇಕು ಅಂತ ಕುಳಿತಿದ್ದಾರೆ. ವ್ಯಾಪಾರಕ್ಕಾಗಿ ದೊಡ್ಡ ಸಚಿವ ಸ್ಥಾನ ಬೇಕಾ?. ಮಂತ್ರಿಗಳು ಹಾಗೂ ಸರ್ಕಾರದ ವರ್ಚಸ್ಸು ಕಡಿಮೆಯಾಗಲಿದೆ. ಎಲ್ಲಾ ಸಚಿವರು ಅಂತ ಹೇಳಲ್ಲ, ಕೆಲವರು ಈ ರೀತಿ ಮಾಡ್ತಿದ್ದಾರೆ. ಕೆಲವರು ಬಹಳ ಉದ್ಧಟತನ ಮಾಡ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರಬೇಕು ಅಂತ ಸಂಘಟನೆ ಮಾಡಿತ್ತು. ಅಧಿಕಾರ ಬೇರೆಯವರು ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಿರಿಯ ಶಾಸಕರು ಸಭೆ ಸೇರಿದ್ದಾರೆನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ನೇತೃತ್ವದಲ್ಲಿ ಅಂತ ಇಲ್ಲ, ನಾವೆಲ್ಲಾ ಸಮಾನ ಮನಸ್ಕರು. ಬಹಳ ಜನ ಬಿಜೆಪಿ ಶಾಸಕರಿದ್ದೇವೆ. ಪಕ್ಷ ಹಾಗೂ ಸಿಎಂಗೆ ಮುಜುಗರ ಆಗಬಾರದು ಅಂತ ಇದ್ದೇವೆ. ಇನ್ನೂ ಎರಡು ವರ್ಷ ಸ್ಥಿರ ಸರ್ಕಾರ ನೀಡಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು, ಬಂದ್ರೆ ಅದರ ವಿರುದ್ಧ ನಿಲ್ಲುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು ಅನ್ನೋ ಅಪೇಕ್ಷೆ ಇದೆ. ಮೊದಲು ರಾಜೀನಾಮೆ ಕೊಟ್ಟು ಬಂದಿದ್ದು ಆನಂದ್ ಸಿಂಗ್. ಅವರಿಗೆ ನಿಮ್ಮ ಪರವಾಗಿ ಇರೋದಾಗಿ ಹೇಳಿದ್ದೆವು ಎಂದು ಸ್ಪಷ್ಟಪಡಿಸಿದರು.ನನ್ನ ಕ್ಷೇತ್ರ ಜನತೆ ಕಾಯ್ತಿದ್ದಾರೆ, ಮೂರು ಬಾರಿ ಗೆಲ್ಲಿಸಿದ್ದಾರೆ. ಅಬಕಾರಿ ಖಾತೆ ಕೊಟ್ಟಾಗ ಉತ್ತಮವಾಗಿ ನಿಭಾಯಿಸಿದೆ. ನನಗೆ ಕಳೆದ ವಾರ ನಡೆದ ಘಟನೆ ನೋವು ತಂದಿದೆ. ಬೇರೆ ಪಕ್ಷದಿಂದ ಬಂದವರನ್ನು ಗೌರವಿಸುತ್ತೇನೆ. ನಾವು ಹಿರಿಯರಲ್ವಾ, ನಮಗಿಂತ ಹಿರಿಯರಿಲ್ವಾ.? ನಾನು ಬಹಿರಂಗವಾಗಿ ಹೇಳಿಕೆ ನೀಡಲ್ಲ. ಸಿಎಂ ಶಾಸಕಾಂಗ ಸಭೆ ಕರೆದಾಗ, ನೇರವಾಗಿ ಅಲ್ಲಿಯೇ ಹೇಳುತ್ತೇನೆ. ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಳಿ ಹೇಳುತ್ತೇನೆ ಎಂದು ತಿಳಿಸಿದರು. ಸಚಿವ ಸ್ಥಾನ ಕೊಡುವುದು ಗೌರವಕ್ಕಾಗಿ, ದೊಡ್ಡ ಖಾತೆ ಯಾಕೆ ಬೇಕು?. ನಮ್ಮ ಪೂರ್ವಜರು ತೆಂಗಿನ ಮರ ನೆಟ್ಟಿದ್ರು, ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.