ಬೆಂಗಳೂರು: ಮೂರು ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು, ಈ ಸಂದರ್ಭದಲ್ಲಿ ಡಿಸಿಎಂ ಸ್ಥಾನದ ಅಗತ್ಯವಿಲ್ಲ, ದುರ್ಬಲ ಸಿಎಂ ಇದ್ದ ಸಂದರ್ಭದಲ್ಲಿ ಡಿಸಿಎಂ ನೇಮಕ ಮಾಡಬೇಕು ಆದರೆ ಇಲ್ಲಿ ಸಿಎಂ ಬಿಎಸ್ವೈ ಸಮರ್ಥರಿದ್ದಾರೆ ಹಾಗಾಗಿ ಮೂರೂ ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವ ಸಂಬಂಧ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಸ್ಥಾನಗಳು ರದ್ದಾಗಬೇಕೆಂಬುದು ನನ್ನ ಅಭಿಪ್ರಾಯ ಜೊತೆಗೆ ಸಂಸದರು, ಪಕ್ಷದ ಹಲವು ಶಾಸಕರು ಸೇರಿದಂತೆ ಜನಾಭಿಪ್ರಾಯವೂ ಇದೇ ಆಗಿದೆ. ನಾನು ಈ ಕುರಿತು ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದೇನೆ, ಆದರೆ ಮಾತುಕತೆಯ ವಿವರಗಳನ್ನು ಬಹಿರಂಗವಾಗಿ ಹೇಳಲ್ಲ ಎಂದರು.
ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ನೋಡೋಣ ಪಕ್ಷದ ಕಾರ್ಯಕರ್ತನಾಗಿ ನನ್ನ ಮನಸ್ಸಿನ ಅಭಿಪ್ರಾಯ ಅಧ್ಯಕ್ಷರಿಗೆ ಹೇಳಿದ್ದೇನೆ ನನಗೆ ಸಂಘಟನೆ ಹೊಸದಲ್ಲ ಪಕ್ಷ ನನ್ನ ತಾಯಿ ಸಮಾನ, ನನ್ನ ಉಸಿರು ಚುನಾಯಿತ ಪ್ರತಿನಿಧಿಗಳಿಗೆ ಹೇಳಬೇಕಾಗಿರುವುದನ್ನು ಹೇಳಲು ಆಗುತ್ತಿಲ್ಲ ಆದರೆ ನಾನು ಕಾರ್ಯಕರ್ತನಾಗಿ ಅಭಿಪ್ರಾಯ ಹೇಳಿದ್ದೇನೆ ಎಂದರು.