ಬೆಂಗಳೂರು: ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿ ವರದಿ ಪ್ರಸಾರ ಮಾಡದಂತೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ನಗರದ ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.
ಈ ಕುರಿತು ನಗರದ ಸಿಟಿ ಸಿವಿಲ್ ಕೋರ್ಟ್ಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಹಿಂದೆ ಸಿ.ಡಿ. ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನ್ಯಾಯಾಲಯದ ಮೆಟ್ಟಿಲೇರಿ ತಮ್ಮ ವಿರುದ್ಧ ಮಾನಹಾನಿ ವರದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದರು. ಆ ಬಳಿಕ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಆರು ಮಂದಿ ಸಚಿವರು ಸಿ.ಡಿ. ಭೀತಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂಪಿ ರೇಣುಕಾಚಾರ್ಯ ಕೂಡ ಕೋರ್ಟ್ ಮೆಟ್ಟಿಲೇರಿ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ಪಡೆದಿದ್ದಾರೆ. ಡಿಜಿಟಲ್ ಯುಗದಲ್ಲಿ ಯಾರನ್ನು ಹೇಗೆ ಬೇಕಾದರೂ ಬಿಂಬಿಸಲು ಸಾಧ್ಯವಿದ್ದು, ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿರುವ ಸಾಧ್ಯತೆ ಇದೆ. ಅಂತಹ ಮಾನಹಾನಿಕರ ಸಂಗತಿಯನ್ನು ಪ್ರಸಾರ ಮಾಡದಂತೆ ರೇಣುಕಾಚಾರ್ಯ ನ್ಯಾಯಾಲಯವನ್ನು ಕೋರಿದ್ದಾರೆ.
ಓದಿ: 195 ದಿನಗಳಲ್ಲಿ ಮೂರು ಕೋಟಿಯಷ್ಟು ಜನರಿಗೆ ಲಸಿಕೆ: 6ನೇ ಸ್ಥಾನದಲ್ಲಿ ಕರ್ನಾಟಕ