ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನಂತರ ಶಾಸಕರಲ್ಲಿ ಎದ್ದಿರುವ ಅಸಮಾಧಾನದ ಹೊಗೆ ಇನ್ನು ನಿಂತಿಲ್ಲ. ಸೋಮವಾರ ಆಪ್ತ ಶಾಸಕರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚೆ ನಡೆಸಿದ್ದು ತಮ್ಮ ಅಸಮಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ವಿಧಾನ ಮಂಡಲ ಜಂಟಿ ಅಧಿವೇಶನ ನಡೆಯುತ್ತಿರುವ ನಡುವೆಯೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತದ ಕೆಲ ಶಾಸಕರ ನಿಯೋಗ ಭೇಟಿ ನೀಡಿದೆ. ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಡಾ.ಶಿವರಾಜ್ ಪಾಟೀಲ್, ರಾಜುಗೌಡ ಸೇರಿ ಎಂಟಕ್ಕೂ ಹೆಚ್ಚು ಶಾಸಕರು ಸಿಎಂ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು.
ಈ ವೇಳೆ ತಮ್ಮ ಅಸಮಧಾನ ವ್ಯಕ್ತಪಡಿಸಿರುವ ಶಾಸಕರು, ತಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಬದಲಾಗಿದೆ. ಮೊದಲಿನಂತೆ ನಮ್ಮನ್ನು ಕಾಣುತ್ತಿಲ್ಲ ಎಂದು ಪರೋಕ್ಷವಾಗಿ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಿದ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಸಕರ ಅಭಿಪ್ರಾಯ, ಮನವಿ ಆಲಿಸಿದ ಸಿಎಂ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವುದಾಗಿ ಭರವಸೆ ನೀಡಿದ್ದಾರೆ. ನಾಳೆ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ದು, ಪಾಲ್ಗೊಳ್ಳುವಂತೆಯೂ ಸಿಎಂ ಸೂಚನೆ ನೀಡಿದ್ದರು.