ಬೆಂಗಳೂರು : ಬಸವಣ್ಣನವರ ವಚನಗಳು ಸರ್ವಕಾಲಕ್ಕೂ ಅತ್ಯಂತ ಶ್ರೇಷ್ಠವಾಗಿವೆ. ವಿಶ್ವಕ್ಕೆ ವೀರಶೈವ ಸಮುದಾಯದ ಕೊಡುಗೆ ಅತ್ಯಂತ ದೊಡ್ಡದು. ಅವರ ವಚನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹೇಳಿದರು.
ನಗರದ ಬಸವೇಶ್ವರ ವೃತ್ತದ ಬಳಿ ಇಂದು ಅಖಿಲ ಭಾರತ ವಿಶ್ವ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ನವೀಕೃತ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಸಾಧ್ಯವಾದಷ್ಟು ಬಸವಣ್ಣನವರ ವಚನಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಇಂದು ಡ್ರಗ್ಸ್ ಸೇರಿದಂತೆ ಹಲವು ಮಾದಕ ವಸ್ತುಗಳ ಮಾರಾಟ ಸೇವನೆ ಹೆಚ್ಚಾಗುತ್ತಿದೆ. ನಿಜವಾದ ಬದುಕಿನ ಅರ್ಥ ಅರಿತು ಬಾಳಬೇಕಾದ್ರೆ ಬಸವಣ್ಣನವರ ಸಂದೇಶಗಳು ಸ್ಫೂರ್ತಿದಾಯಕ. ಬೆಂಗಳೂರಿನ ಮೇಯರ್ ಆಗಿ ಗಂಗಾಂಬಿಕೆ ಅವರು ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಮಾಜಿ ಮೇಯರ್ ಗಂಗಾಂಬಿಕೆ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಚಿವ ಜೆ ಸಿ ಮಾಧುಸ್ವಾಮಿ, ನಿಕಟಪೂರ್ವ ಮಹಾಪೌರರಾದ ಗಂಗಾಬಿಕಾ ಮಲ್ಲಿಕಾರ್ಜುನ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಶಂಕರ್ ಮಹಾದೇವ ಬಿದರಿ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಹಾಗೂ ಎಸ್ ಚಂದ್ರಮೌಳಿ ಪಾಲ್ಗೊಂಡಿದ್ದರು.