ಬೆಂಗಳೂರು : ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ನೇತಾಜಿಯವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಈ ವರ್ಷವೇ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗುತ್ತದೆ.
ಈ ಕುರಿತಂತೆ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು. ಈ ವರ್ಷವಿಡೀ ರಾಜ್ಯಾದ್ಯಂತ ಸುಭಾಷ್ ಚಂದ್ರ ಬೋಸ್ ಕುರಿತಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರಮುಖವಾಗಿ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ನೇತಾಜಿ ಕುರಿತಾದ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿ ರಾಜ್ಯಾದ್ಯಂತ ವಿತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಜತೆಗೆ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ 'ಯುವ ಸಬಲೀಕರಣ' ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಇಂದು ಇಡೀ ಭಾರತ ದೇಶಕ್ಕೆ ಹೆಮ್ಮೆಯ ದಿನ. ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ದ ಸೈನ್ಯ ಕಟ್ಟಿದ ಅಪ್ರತಿಮ ನಾಯಕ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆ ಮಾಡುವಲ್ಲಿ ಅವರ ಪಾತ್ರ ದೊಡ್ಡದು. ಆಜಾದ್ ಹಿಂದ್ ಫೌಜ್‌ನಲ್ಲಿ 60 ಸಾವಿರ ಯುವಕರನ್ನು ತೊಡಗಿಸಿಕೊಂಡರು. ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಿದರು ಎಂದು ಸಿಎಂ ಸ್ಮರಿಸಿದರು.
ದೇಶಭಕ್ತಿ, ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯವನ್ನು ಯುವಕರಲ್ಲಿ ಬಿತ್ತಬೇಕಿದೆ. ಈ ಹಿನ್ನೆಲೆ ಇಡೀ ವರ್ಷ ನೇತಾಜಿಯವರ ಹುಟ್ಟು ಹಬ್ಬವನ್ನು ಕಾಲೇಜಿನಲ್ಲಿ ಡಿಬೇಟ್, ಎಕ್ಸಿಬಿಷನ್ ಮೂಲಕ ಮಾಡಲಾಗುವುದು ಎಂದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಅಭಿವೃದ್ಧಿ ಟ್ರಸ್ಟ್ ವಿವಿಧ ಬೇಡಿಕೆಗಳನ್ನು ಸಿಎಂ ಅವರಿಗೆ ಸಲ್ಲಿಸಿತು. ಟ್ರಸ್ಟ್‌ನ ಅಧ್ಯಕ್ಷ ಜಿ.ಆರ್.ಶಿವಶಂಕರ್, ಸಂಘಟನಾ ಕಾರ್ಯದರ್ಶಿ ಎಂ.ರಾಜ್‍ಕುಮಾರ್, ಟ್ರಸ್ಟಿಗಳಾದ ರಾಜಯೋಗೀಂದ್ರ ವೀರಯ್ಯಶಾಸ್ತ್ರಿ ಮಠ ಗುರೂಜಿ ಹಾಗೂ ಗುರುಶಾಸ್ತ್ರಿ ಮಠ ಮೊದಲಾದವರು ಈ ವೇಳೆ ಹಾಜರಿದ್ದರು.
ಇದನ್ನೂ ಓದಿ: ನೇತಾಜಿಯವರ 125ನೇ ಜನ್ಮವಾರ್ಷಿಕೋತ್ಸವ: ಮರಳು ಕಲಾಕೃತಿ ಮೂಲಕ ಗೌರವ