ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜ ಸ್ತಂಭ ಅಳವಡಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು. ಈ ಘಟನೆಯ ಸಂಬಂಧ ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಜಿಲ್ಲಾ ಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳಿ ಘಟನೆಯಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ, ಮೇಲ್ನೋಟಕ್ಕೆ ಯಾರ ತಪ್ಪು ಕೂಡ ಕಾಣಿಸುತ್ತಿಲ್ಲ. ಇದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಹೇಳಿದರು.
ಗಾಯಾಳುಗಳು 24 ಗಂಟೆ ನಿಗಾ ಘಟಕದಲ್ಲಿದ್ದಾರೆ. ಶೀಘ್ರದಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು.
ಶಿಕ್ಷಣ ಇಲಾಖೆಯವರೂ ಕೂಡ ಇಂಥ ಸಂದರ್ಭದಲ್ಲಿ ಸ್ವಲ್ಪ ಜಾಗರೂಕತೆಯಿಂದ ಇರಬೇಕು. ಬೇರೆ ಯಾವುದೇ ಸಂದರ್ಭದಲ್ಲಿ ಆಗಿದ್ರೆ ತಪ್ಪು ಅನ್ನಬಹುದಿತ್ತು. ಆದ್ರೆ ಸಂಭ್ರಮಾಚರಣೆಯಲ್ಲಿ ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಹೀಗಾಗಿ ನಾನು ಯಾರನ್ನೂ ದೂರಲ್ಲ ಎಂದರು.
ಇದನ್ನೂ ಓದಿ: ಧ್ವಜ ಸ್ತಂಭ ನೆಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು, ಶಿಕ್ಷಣ ಸಚಿವರ ಸಂತಾಪ