ಬೆಂಗಳೂರು: ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಎಸ್ಡಿಆರ್ಎಫ್ನಡಿ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕೋವಿಡ್ -19, ಪ್ರವಾಹದಿಂದ ನಲುಗಿದ್ದ ರಾಜ್ಯ ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲಾ ಎಸ್ಡಿಆರ್ಎಫ್ ಮೊತ್ತವನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ಇದೀಗ ಕೊರೊನಾ ನಿಯಂತ್ರಣ ಮತ್ತು ಮಳೆ ಹಾನಿ ಪರಿಹಾರ ಎರಡಕ್ಕೂ ಹಣ ಹೊಂದಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೇಂದ್ರ ಸರ್ಕಾರ ಎಸ್ಡಿಆರ್ಎಫ್ (SDRF)ನಡಿ ಎರಡನೇ ಕಂತಿನ ಮೊತ್ತವಾದ 395.50 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಕೋವಿಡ್ ನಿರ್ವಹಣೆಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಂಬಂತೆ ಬಂದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಈ ಎಸ್ಡಿಆರ್ಎಫ್ ಹಣ ಕೊಂಚ ರಿಲೀಫ್ ನೀಡಿದೆ. ಆದರೆ ಕೋವಿಡ್ ನಿರ್ವಹಣೆ ಮತ್ತು ನೆರೆ ಪರಿಹಾರಕ್ಕೆ ಈ ಹಣವನ್ನು ಹೊಂದಾಣಿಕೆ ಮಾಡುವುದೇ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಎಸ್ಡಿಆರ್ಎಫ್ನಡಿ ಅನುದಾದಲ್ಲಿ ಕರ್ನಾಟಕದ ಪಾಲಿಗೆ 2020-21 ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 1,054 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಕೇಂದ್ರ ಸರ್ಕಾರದ ಕೊಡುಗೆ 791 ಕೋಟಿ ರೂ. ಇರಲಿದೆ. ಉಳಿದ ಪಾಲು ರಾಜ್ಯ ಸರ್ಕಾರದ್ದಾಗಿದೆ. ಕೋವಿಡ್ 19 ನಿಯಂತ್ರಣ ಸಂಬಂಧ ಈ ಮುಂಚೆಯೇ ಕೇಂದ್ರ ಸರ್ಕಾರ ತನ್ನ ಮೊದಲ ಕಂತು 395.50 ಕೋಟಿ ರೂ. ಎಸ್ಡಿಆರ್ಎಫ್ ಹಣವನ್ನು ಬಿಡುಗಡೆ ಮಾಡಿತ್ತು. ಇದೀಗ ತನ್ನ ಪಾಲಿನ ಎರಡನೇ ಕಂತು 395.50 ಕೋಟಿ ರೂ.ವನ್ನು ಬಿಡುಗಡೆ ಮಾಡಿದೆ. ಅಲ್ಲಿಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲಾ 791 ಕೋಟಿ ರೂ.ವನ್ನು ಕರ್ನಾಟಕಕ್ಕೆ ಬಿಡುಗಡೆಗೊಳಿಸಿದೆ.
ಕೋವಿಡ್ಗಾಗಿ ಬಿಡುಗಡೆ ಮಾಡಿದ್ದೆಷ್ಟು?:
ಕೇಂದ್ರ ಸರ್ಕಾರ ಕೋವಿಡ್ -19 ನಿರ್ವಹಣೆಗಾಗಿ ಏಪ್ರಿಲ್ನಲ್ಲೇ ಕರ್ನಾಟಕಕ್ಕೆ ಮೊದಲ ಕಂತಿನ 395.50 ಕೋಟಿ ರೂ. ಎಸ್ಡಿಆರ್ಎಫ್ ಹಣ ಬಿಡುಗಡೆ ಮಾಡಿತ್ತು.
ಈ ಮೊತ್ತದಲ್ಲಿ ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಗಾಗಿ ಬಹುತೇಕ ಎಲ್ಲಾ ಹಣವನ್ನು ವಿನಿಯೋಗ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೃಹ ಇಲಾಖೆ, ಬಿಬಿಎಂಪಿ, ಡಿಸಿಗಳಿಗೆ, ಕಾರಾಗೃಹ ಇಲಾಖೆಗೆ ಕೋವಿಡ್ -19 ನಿರ್ವಹಣೆಗಾಗಿ ಎಸ್ಡಿಆರ್ಎಫ್ ಹಣವನ್ನು ವಿನಿಯೋಗಿಸಲಾಗಿದೆ. ಕೇಂದ್ರ ನೀಡಿದ 390.50 ಎಸ್ಡಿಆರ್ಎಫ್ನ ಮೊದಲ ಕಂತಿನ ಪೈಕಿ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಕೋವಿಡ್ ನಿರ್ವಹಣೆ ನಿಮಿತ್ತ 208.01 ಕೋಟಿ ರೂ. ಬಿಡುಗಡೆ ಮಾಡಿತ್ತು.
ಬಳಿಕ ಎಸ್ಡಿಆರ್ಎಫ್ನಿಂದ ಒಟ್ಟು 90.30 ಕೋಟಿ ರೂ. ಮೊತ್ತವನ್ನು ಎಲ್ಲಾ ಡಿಸಿಗಳ ಖಾತೆಗೆ ಕೋವಿಡ್ ನಿರ್ವಹಣೆಗಾಗಿ ಬಿಡುಗಡೆ ಮಾಡಲಾಗಿತ್ತು. ಆ.14ಕ್ಕೆ ಮತ್ತೆ ಎಸ್ಡಿಆರ್ಎಫ್ ನಿಧಿಯಿಂದ ಎಲ್ಲಾ ಡಿಸಿಗಳಿಗೆ ಕೋವಿಡ್ -19 ನಿರ್ವಹಣೆಗಾಗಿ 85.10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಕೋವಿಡ್ಗಾಗಿ ಎಸ್ಡಿಆರ್ಎಫ್ನಿಂದ ರಾಜ್ಯ ಸರ್ಕಾರ ಸುಮಾರು 383.41 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.
ನೆರೆ ಪರಿಹಾರಕ್ಕಾಗಿ ಎಲ್ಲಿದೆ ಹಣ?:
ಇದೀಗ ಕೇಂದ್ರ ಸರ್ಕಾರ ಎರಡನೇ ಕಂತಿನ 395.50 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸಿದೆ. ನೆರೆ ಹಾನಿಯಿಂದ ತತ್ತರಿಸಿರುವ ರಾಜ್ಯಕ್ಕೆ ಈ ಪರಿಹಾರ ಹಣ ತಕ್ಷಣಕಷ್ಟೇ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆದರೆ ಎರಡನೇ ಕಂತಿನ ಎಸ್ಡಿಆರ್ಎಫ್ ಹಣವನ್ನು ಕೋವಿಡ್ ನಿರ್ವಹಣೆಗೂ ವಿನಿಯೋಗಿಸಬೇಕಾಗಿದೆ. ಈಗಾಗಲೇ ರಾಜ್ಯ ಸರ್ಕಾರ ನೆರೆ ಹಾನಿಯಿಂದ ಸುಮಾರು 4,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಹೇಳಿದ್ದು, ಕೇಂದ್ರದಿಂದ ನೆರವು ಕೋರಿದೆ. ಈಗ ನೀಡಿರುವ 395.50 ಕೋಟಿ ಹಣವನ್ನು ನೆರೆ ಪರಿಹಾರದ ಜೊತೆಗೆ ಕೋವಿಡ್ ನಿಯಂತ್ರಣಕ್ಕೂ ಬಳಸಬೇಕಾಗಿದೆ.
ಎಲ್ಲಾ ಡಿಸಿಗಳ ಪಿಡಿ ಖಾತೆಯಲ್ಲಿ 1268 ಕೋಟಿ ರೂ. ಹಣ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಆದರೆ ಈ ಹಣದಲ್ಲಿ ಕೋವಿಡ್ ಮೊತ್ತವೂ ಒಳಗೊಂಡಿರುವುದಲ್ಲದೆ, ಕಳೆದ ವರ್ಷದ ನೆರೆ ಹಾನಿ ಪರಿಹಾರ ಮೊತ್ತವೂ ಒಳಗೊಂಡಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಕೋವಿಡ್ ಜೊತೆಗೆ ನೆರೆ ಪರಿಹಾರಕ್ಕಾಗಿ ಹಣ ಹೊಂದಿಸುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನೆರೆ ಹಾನಿ ಪರಿಹಾರಕ್ಕಾಗಿ ಇನ್ನೇನಿದ್ದರೂ ಎನ್ಡಿಆರ್ಎಫ್ ಹಣವನ್ನೇ ಸರ್ಕಾರ ನೆಚ್ಚಬೇಕಾಗಿದೆ. ಆದರೆ ಎನ್ಡಿಆರ್ಎಫ್ (NDRF) ಹಣ ಬಿಡುಗಡೆಯಾಗಬೇಕಾದರೆ, ರಾಜ್ಯ ಸರ್ಕಾರ ನೆರೆ ಹಾನಿಯ ನಷ್ಟದ ಪ್ರಸ್ತಾಪ ಸಲ್ಲಿಸಬೇಕು. ಬಳಿಕ ಕೇಂದ್ರ ತಂಡ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹಣ ಬಿಡುಗಡೆ ಮಾಡುತ್ತದೆ. ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ನಾಲ್ಕೈದು ತಿಂಗಳು ಬೇಕು. ಹಾಗಿದ್ದರೂ ಕೇಳುವ ನಷ್ಟ ಪರಿಹಾರ ಮೊತ್ತದಲ್ಲಿ ಕೇವಲ 5-10% ಮಾತ್ರ ಎನ್ಡಿಆರ್ಎಫ್ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.