ಬೆಂಗಳೂರು: ಬಿಜೆಪಿ ಮಾಜಿ ಮಹಿಳಾ ಕಾರ್ಪೋರೇಟರ್ ಹತ್ಯೆ ಪ್ರಕರಣ ಸಂಬಂಧ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ಮೂರು ತಂಡ ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಮುರುಗನ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಕಿರಿಯ ಅಧಿಕಾರಿಗಳಿಂದ ಕೃತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಮಾಡುವಂತೆ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ಬೆಳಗ್ಗೆ ರೇಖಾ ಅವರು ಅವರ ಕಚೇರಿ ಮುಂದೆ ಫುಡ್ ನೀಡಿ ಮನೆ ಕಡೆ ಬರುವಾಗ ಆರೋಪಿಗಳ ಕೃತ್ಯ ಎಸಗಿದ್ದಾರೆ. ಈ ವೇಳೆ ಇಬ್ಬರು ಬಂದು ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಯಲಿಲ್ಲ. ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿದೆ. ವಿಶೇಷ ತಂಡಗಳು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಶೀಘ್ರದಲ್ಲಿ ಆರೋಪಿಗಳನ್ನ ಪತ್ತೆ ಮಾಡಲಾಗುವುದು ಎಂದಿದ್ದಾರೆ.
ಸಂಬಂಧಿಕರಿಂದಲೇ ರೇಖಾ ಕೊಲೆ ?
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಜೊತೆ ಶಂಕಿತ ಆರೋಪಿಗಳ ಪೀಟರ್ ಹಾಗೂ ಸೂರ್ಯ ಕೆಲಸ ಮಾಡುತ್ತಿದ್ದರು. ಇಂದು ಸಹ ಆಹಾರ ವಿತರಣೆ ವೇಳೆ ರೇಖಾಳ ಜೊತೆಯೇ ಇದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಪೀಟರ್ ವಿರುದ್ಧ ಒಂದು ಕೊಲೆ ಕೇಸ್ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಶಂಕಿತರ ಪೂರ್ವಾಪರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ರೇಖಾ ಕದಿರೇಶ್ ಕೊಲೆಗೆ ಬಗ್ಗೆ ಪ್ರತಿಕ್ರಿಯಿಸಿರುವ ಪುತ್ರ ರಾಹುಲ್, ಪೀಟರ್ ನಮಗೆ ತುಂಬಾ ಆತ್ಮೀಯನಾಗಿದ್ದ. ಈತ ಕೊಲೆ ಮಾಡಿದ್ದಾನೆ ಎಂಬುವುದು ಅಶ್ಚರ್ಯ ತಂದಿದೆ. ನಾನು ನನ್ನ ಸಹೋದರಿಯ ಮನೆಯಲ್ಲಿಯೇ ವಾಸವಾಗಿದ್ದೆ. ನಮಗೆ ಜೀವ ಬೆದರಿಕೆ ಹಿನ್ನೆಲೆ ಅಮ್ಮ ನಮ್ಮನ್ನು ಅಲ್ಲಿ ಬಿಟ್ಟಿದ್ದರು. ಪ್ರತಿದಿನ ಕರೆ ಮಾಡಿ ಮಾತನಾಡುತ್ತಿದ್ದರು.
ನಂಬಿಕಸ್ಥರಿಂದ ಕೊಲೆ ಆಗಿದೆ. ನಮ್ಮ ತಾಯಿಗೂ ನಾವು ಇಲ್ಲಿಗೆ ಬರಲು ಹೇಳುತ್ತಿದ್ದೇವು. ನಾವು ಹುಷಾರಾಗಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಿದ್ದರು. ಅವರು ತಮಗಿರುವ ಜೀವ ಭಯದ ಬಗ್ಗೆ ನಮಗೆ ಯಾವತ್ತೂ ಹೇಳಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.
ಕದಿರೇಶ್ ಕೊಲೆ ತನಿಖೆ ನಡೆದಿದ್ದರೆ..
ರೇಖಾ ಕದಿರೇಶ್ ಕೊಲೆ ಬಗ್ಗೆ ಪ್ರತಿಕ್ರಿಯಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಕಳೆದ ಎರಡು ವರ್ಷದ ಹಿಂದೆ ಕದಿರೇಶ್ ಹತ್ಯೆಯಾಗಿತ್ತು. ಅದಾದ ನಂತರ ಸಹ ರೇಖಾ ಸಾರ್ವಜನಿಕವಾಗಿ ಬಹಳ ಕೆಲಸ ಮಾಡುತ್ತಿದ್ದರು.
ಬುಧವಾರ ಕೂಡಾ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದರು. ಇನ್ನೂ ಐದಾರು ತಿಂಗಳಿನಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಮತ್ತೆ ಚುನಾವಣೆಯಲ್ಲಿ ರೇಖಾ ಗೆಲ್ಲಲಿದ್ದಾರೆ ಎಂಬ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ.
ಶಾಸಕ ಜಮೀರ್ ಆರೋಪಿಗಳಿಗೆ ಬೆಂಬಲ ನೀಡಿದ್ದಾರೆ. ಕದಿರೇಶ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯ ತನಿಖೆ ಸರಿಯಾಗಿ ನಡೆದಿದ್ದರೆ ಮತ್ತೊಂದು ಜೀವ ಹೋಗುತ್ತಿರಲಿಲ್ಲ.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಸಿಎಂ ಖಡಕ್ ಮಾತು
ಅಂದು ಸಿದ್ಧರಾಮಯ್ಯ ಸರ್ಕಾರವಿತ್ತು. ಅತೂಶ್ ಎಂಬಾತನ ತನಿಖೆಯಾಗಬೇಕಿತ್ತು. ಆದರೆ ಅತೂಶ್, ಜಮೀರ್ ಬೆಂಬಲದಿಂದ ತನಿಖೆಯಿಂದ ತಪ್ಪಿಸಿಕೊಂಡಿದ್ದನು. ಈ ಕೊಲೆಗೂ ಆತನೇ ಕಾರಣ, ಅತೂಶ್ನನ್ನು ವಿಚಾರಣೆ ಮಾಡಿದರೆ ಎಲ್ಲವೂ ಹೊರ ಬೀಳಲಿದೆ ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.
ಸದ್ಯ ಕೊಲೆ ಸಂಬಂಧ ರೇಖಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮಧ್ಯಾಹ್ನ ಮೂರು ಗಂಟೆ ವೇಳೆ ಕುಟುಂಬಕ್ಕೆ ಮೃತದೇಹ ಹಸ್ತಾಂತರವಾಗಲಿದೆ. ಬಳಿಕ ಮನೆ ಬಳಿ ಅಂತಿಮ ದರ್ಶನಕ್ಕೆ ಮೃತದೇಹ ಇಡುವ ತಯಾರಿ ನಡೆಸಲಿದ್ದು, ಪೊಲೀಸರ ಜೊತೆ ಕುಟುಂಬಸ್ಥರು ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.