ಬೆಂಗಳೂರು: ಹೊಸಗುಡ್ದದಹಳ್ಳಿ ಕೆಮಿಕಲ್ ಕಾರ್ಖಾನೆ ಬೆಂಕಿ ದುರಂತದಲ್ಲಿ ಛಾವಣಿ ಕುಸಿದು ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಜ್ವಾಲೆ ಆವರಿಸಿದ ಕಾರಣ ಸುತ್ತಮುತ್ತಲಿನ ಹಲವು ಮನೆಗಳು ಹಾನಿಗೊಳಗಾಗಿವೆ.
ಘಟನಾ ಸ್ಥಳಕ್ಕೆ 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಲ್ಲಿ 200ಕ್ಕೂ ಅಧಿಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಕಳೆದ 22 ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅಲ್ಲಲ್ಲೇ ಮುರಿದು ಬಿದ್ದಿರುವ ಅವಶೇಷಗಳ ಮಧ್ಯೆ ಇನ್ನೂ ಬೆಂಕಿ ಉರಿಯುತ್ತಿದೆ.
ಘಟನೆಯಲ್ಲಿ ಮಿಲಿಟರಿ ಫ್ಯಾಮಿಲಿಯ ಪ್ರಸನ್ನ ಎಂಬುವರ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ ಬಟ್ಟೆ, ಚಿನ್ನದ ಆಭರಣಗಳು ನಾಶವಾಗಿವೆ. ಸುಮಾರು 80 ಸಾವಿರಕ್ಕೂ ಅಧಿಕ ನಗದು ಹಣ ಸುಟ್ಟು ಕರಕಲಾಗಿದೆ. ಈ ಹಣವನ್ನು ಪ್ರಸನ್ನ ಅವರು ತೋರಿಸಿ ಅಳಲು ತೋಡಿಕೊಂಡಿದ್ದಾರೆ. ಹಾಗೆಯೇ ಟಿವಿ, ರೆಫ್ರಿಜಿರೇಟರ್ ಸೇರಿದಂತೆ ಹಲವು ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟಿವೆ. ಘಟನೆ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಭಾರಿ ದುರಂತ ತಪ್ಪಿದೆ. ಕಳೆದುಕೊಂಡ ವಸ್ತು, ಹಣ ವಾಪಸ್ ನೀಡುವಂತೆ ಪ್ರಸನ್ನ ಮನವಿ ಮಾಡಿದ್ದು, ಗೋಡೌನ್ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ.
ಅಷ್ಟೇಅಲ್ಲ, ಫ್ಯಾಕ್ಟರಿಯ ಸಮೀಪವಿದ್ದ ಇತರೆ ಮನೆಗಳಿಗೂ ಬೆಂಕಿ ತಗುಲಿದ್ದು, ಮನೆಗಳಲ್ಲಿನ ಬೆಲೆ ಬಾಳುವ ವಸ್ತುಗಳು, ಚಿನ್ನಾಭರಣಗಳು, ನೀರಿನ ಟ್ಯಾಂಕ್ಗಳು, ಸೋಲಾರ್, ಕಡತಗಳೆಲ್ಲ ಸುಟ್ಟು ಕರಕಲಾಗಿವೆ. ಈ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಕಾರ್ಖಾನೆಗೆ ಬೆಂಕಿ ಬಿದ್ದು 24 ಗಂಟೆಗಳೇ ಆದರು ಇನ್ನೂ ಕೂಡ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಕಷ್ಟ ಕೇಳಲು ಧಾವಿಸಿಲ್ಲ ಎಂದು ದೂರಿದರು.
ಸದ್ಯ ಈ ಹಳ್ಳಿಯಲ್ಲಿ ಅಕ್ರಮವಾಗಿ ಸಣ್ಣ ಕೈಗಾರಿಕೆಗಳು ತಲೆ ಎತ್ತುತ್ತಿದ್ದು, ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೆಲ್ಲ ಕಂಡು ಕಾಣದಂತೆ ಇರುವುದನ್ನು ನೋಡಿದರೆ ಅಧಿಕಾರಿಗಳು ಇವರೊಂದಿಗೆ ಶಾಮಿಲ್ ಆಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಸ್ಥಳೀಯರು ಹೇಳಿದರು.