ಬೆಂಗಳೂರು: ನಗರದ ಸೇನಾಪಡೆಯ ಭಾಗವಾಗಿರುವ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನಲ್ಲಿ ಡಿಸೆಂಬರ್ 8 ಮತ್ತು 9 ರಂದು ಎಎಸ್‌ಸಿ ಕೇಂದ್ರದ 11 ನೇ ಎಎಸ್‌ಸಿ (ಆರ್ಮಿ ಸರ್ವಿಸ್ ಕಾರ್ಪ್ಸ್) ಪುನರ್ಮಿಲನ ಮತ್ತು 262ನೇ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಯುವಜನತೆಗೆ ರಾಷ್ಟ್ರದ ಮಿಲಿಟರಿ ಶಕ್ತಿಯ ಬಗ್ಗೆ ತಿಳಿಸಲು ಹಾಗೂ ಅವರನ್ನು ರಕ್ಷಣಾ ಪಡೆಗಳಿಗೆ ಸೇರುವಂತೆ ಪ್ರೇರೇಪಿಸಲು ಮತ್ತು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರದರ್ಶಿಸಲು ವಿವಿಧ ರೀತಿಯ ಸಾಹಸ ಪ್ರದರ್ಶನಗಳ ಪೂರ್ವಭ್ಯಾಸ ಇಂದು ನಡೆಯಿತು.
ಬ್ಯಾಂಡ್ ಪ್ರದರ್ಶನ, ಧ್ವಜಾರೋಹಣ, ಧ್ವಜವಂದನೆ, ಈವೆಂಟ್ ಆರ್ಮಿ ಈಕ್ವೆಸ್ಟ್ರಿಯನ್ ಕ್ರೀಡೆಗಳ ಪ್ರಭಾವಶಾಲಿ ಪ್ರದರ್ಶನ, ಪ್ಯಾರಾ ಮೋಟಾರ್ ಡಿಸ್ಟ್ ಮತ್ತು ಪ್ಯಾರಾಟ್ರಪರ್‌ಗಳಿಂದ ಫ್ರೀ ಫಾಲ್ ಮತ್ತು ಭಾರತೀಯ ವಾಯುಪಡೆಯ ಸಾರಂಗ್ ತಂಡದಿಂದ ಹೆಲಿಕಾಪ್ಟರ್‌ಗಳೊಂದಿಗೆ ಹಾರಾಟ ನಡೆಯಿತು.
ಈ ಸಂದರ್ಭದಲ್ಲಿ ಪೂರೈಕೆ ಮತ್ತು ಸಾರಿಗೆ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎಂಕೆಎಸ್ ಯಾದವ್, ಎ.ಎಸ್.ಸಿಯ ಸೀನಿಯರ್ ಕರ್ನಲ್ ಕಮಾಂಡೆಂಟ್ ಮತ್ತು ಲೆಫ್ಟಿನೆಂಟ್ ಜನರಲ್ ಬಿಕೆ ರೆಪ್ಸ್ ವಾಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಎ.ಎಸ್‌ಸಿ ಸೆಂಟರ್ ಮತ್ತು ಕಾಲೇಜಿನಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಈ ಪೂರ್ವಭ್ಯಾಸ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಯ ಸಿಬ್ಬಂದಿ ಮತ್ತು ಕುಟುಂಬಗಳು, ಅರೆಸೇನಾ ಪಡೆಗಳು, ಪೊಲೀಸ್, ಇತರ ರಕ್ಷಣಾ ಸಂಸ್ಥೆಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.
ಇದನ್ನೂ ಓದಿ: ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ