ಬೆಳಗಾವಿ: ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪ್ರಾದೇಶಿಕ ಉದ್ಯೋಗ ಮೇಳ-2020 ಫೆಬ್ರುವರಿ 28, 29ರಂದು ನಡೆಯಲಿದ್ದು, 20 ಸಾವಿರ ಅಭ್ಯರ್ಥಿಗಳ ನೋಂದಣಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.
ಇಲ್ಲಿನ ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತದ ಸಹಯೋಗ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೃಹತ್ ಪ್ರಾದೇಶಿಕ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಅಚ್ಚುಕಟ್ಟಾಗಿ ಮೇಳವನ್ನು ನಡೆಸಲು ಸಕಲಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಕಂಪೆನಿಗಳು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಸಂದರ್ಶನ ನಡೆಸಲು ಅನುಕೂಲವಾಗುವಂತೆ ವಿವಿಧ ಅಳತೆಯ 75ಕ್ಕೂ ಅಧಿಕ ಸಂದರ್ಶನ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚುವರಿ ಕಾಲೇಜಿನ ಸುಮಾರು 20 ಕೊಠಡಿಗಳನ್ನು ಕೂಡ ಪಡೆಯಲಾಗಿದೆ ಎಂದರು.
ಪ್ರವೇಶ ಪತ್ರ ಕಡ್ಡಾಯ:
ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿಕೊಂಡವರು ಮೇಳ ನಡೆಯುವ ದಿನಗಳಂದು ಬೆಳಿಗ್ಗೆ 8 ಗಂಟೆಗೆ ಆಗಮಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಬಿಇ, ಐಟಿಐ/ಡಿಪ್ಲೊಮಾ ಹೀಗೆ ಆಯಾ ವಿದ್ಯಾರ್ಹತೆಗೆ ಬೇರೆ, ಬೇರೆ ಬಣ್ಣದ ಪ್ರವೇಶ ಪತ್ರಗಳನ್ನು ಮುದ್ರಿಸಲಾಗಿದೆ ಎಂದು ಮಾಹಿತಿ ನೀಡಿದರು.
162 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಎರಡೂ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.