ಬೆಂಗಳೂರು: ಪ್ರಾದೇಶಿಕ ಅಸಮತೋಲನ ಸರಿಪಡಿಸಿ ಸಂಪುಟ ರಚಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಹಳೆ ಮೈಸೂರು ಪ್ರಾಂತ್ಯ, ಕಲ್ಯಾಣ ಕರ್ನಾಟಕ ಮಧ್ಯಕರ್ನಾಟಕ ಭಾಗಕ್ಕೆ ನಿರೀಕ್ಷಿತ ಅವಕಾಶ ಸಿಕ್ಕಿಲ್ಲ. ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ವಂಚಿತ ಜಿಲ್ಲೆಗಳಿಗೆ ಬೊಮ್ಮಾಯಿ ಸಂಪುಟದಲ್ಲಿಯೂ ಅವಕಾಶ ಸಿಕ್ಕಿಲ್ಲ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 18 ಜಿಲ್ಲೆಗಳಿಗೆ ಅವಕಾಶ ಕಲ್ಪಿಸಿದ್ದು ,13 ಜಿಲ್ಲೆಗಳಿಗೆ ಅವಕಾಶ ಲಭ್ಯವಾಗಿಲ್ಲ. ಯಡಿಯೂರಪ್ಪ ಸಂಪುಟದಲ್ಲಿದ್ದ ಜಿಲ್ಲೆಗಳಿಗೇ ಈಗಲೂ ಅವಕಾಶ ನೀಡಿದ್ದು, ಬಿಎಸ್ವೈ ಸಂಪುಟದಲ್ಲಿ ಕೈತಪ್ಪಿದ್ದ ಕೊಪ್ಪಳಕ್ಕೆ ಅವಕಾಶ ನೀಡಿ ಯಡಿಯೂರಪ್ಪ ಸಂಪುಟದಲ್ಲಿದ್ದ ರಾಮನಗರ ಜಿಲ್ಲೆಯನ್ನು ಕೈಬಿಡಲಾಗಿದೆ ಬಿಟ್ಟರೆ ಬೇರೆ ಬದಲಾವಣೆ ಆಗಿಲ್ಲ.
ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ವಂಚಿತ ಜಿಲ್ಲೆಗಳು:
ರಾಯಚೂರು, ಚಿಕ್ಕಮಗಳೂರು, ರಾಮನಗರ, ಬಳ್ಳಾರಿ, ಕೊಡಗು, ಕಲಬುರಗಿ, ಮೈಸೂರು, ಚಾಮರಾಜನಗರ, ದಾವಣಗೆರೆ, ಹಾಸನ, ವಿಜಯಪುರ, ಯಾದಗಿರಿ, ಕೋಲಾರ
ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ವಂಚಿತ ಜಿಲ್ಲೆಗಳು:
ಬಳ್ಳಾರಿ, ವಿಜಯಪುರ, ಚಾಮರಾಜನಗರ, ದಾವಣಗೆರೆ, ಕಲಬುರಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು,ರಾಯಚೂರು, ಯಾದಗಿರಿ ಜಿಲ್ಲೆಗಳಿಂದ ಯಾರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಚಿಕ್ಕಮಗಳೂರು ಮತ್ತು ಕೋಲಾರಕ್ಕೆ ಮೊದಲು ಅವಕಾಶ ಕೊಟ್ಟು ನಂತರ ಸಿ.ಟಿ ರವಿ ಮತ್ತು ಹೆಚ್. ನಾಗೇಶ್ ರಾಜೀನಾಮೆಯಿಂದ ಆ ಜಿಲ್ಲೆಗಳು ಅವಕಾಶ ಕಳೆದುಕೊಂಡಿದ್ದವು. ಆ ಜಿಲ್ಲೆಗಳಿಗೆ ಈಗ ಬೊಮ್ಮಾಯಿ ಸಂಪುಟದಲ್ಲೂ ಅವಕಾಶ ಸಿಕ್ಕಿಲ್ಲ.
ಹೊಸ ಮಂತ್ರಿಮಂಡಲದಲ್ಲಿಯೂ ಪ್ರಾದೇಶಿಕ ಅಸಮಾನತೆ:
ಹೊಸ ಮಂತ್ರಿಮಂಡಲದಲ್ಲಿಯೂ ಪ್ರಾದೇಶಿಕ ಅಸಮಾನತೆ ತಾಂಡವವಾಡುತ್ತಿದೆ. ಹಲವು ಜಿಲ್ಲೆಗಳಿಗೆ ಆದ್ಯತೆ ಸಿಕ್ಕಿಲ್ಲ. ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದ ಜಿಲ್ಲೆಗಳನ್ನು ಈ ಬಾರಿಯೂ ಕೈಬಿಡಲಾಗಿದೆ. ಮುಖ್ಯಮಂತ್ರಿ ಆಗಿ ಮೊದಲ ಸುದ್ದಿಗೋಷ್ಠಿಯಲ್ಲಿಯೇ ಪ್ರಾದೇಶಿಕ ಅಸಮಾನತೆ ಇಲ್ಲದಂತೆ ಸಮತೋಲಿತ ಸಂಪುಟ ರಚನೆ ಮಾಡುವ ಹೇಳಿಕೆ ನೀಡಿದ್ದ ಬಸವರಾಜ ಬೊಮ್ಮಾಯಿ ಮಾತು ತಪ್ಪಿದ್ದಾರೆ. ರಾಜಕೀಯ ಬಲಾಢ್ಯರ ಒತ್ತಡಕ್ಕೆ ಮಣಿದು ಸಂಪುಟ ರಚನೆ ಮಾಡಿದ್ದಾರೆ. ಬೊಮ್ಮಾಯಿ ಸಂಪುಟ ಈ ಹಿಂದೆ ಇದ್ದ ಯಡಿಯೂರಪ್ಪ ಸಂಪುಟಕ್ಕಿಂತ ಭಿನ್ನವಾಗೇನೂ ಇಲ್ಲದಂತಾಗಿದೆ.
ಈ ಬಾರಿ ಹೈಕಮಾಂಡ್ ನಿರ್ಧಾರದಂತೆ ಸಂಪುಟ ರಚನೆಯಾಗಲಿದೆ, ಪ್ರಾದೇಶಿಕವಾರು ಆದ್ಯತೆ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಆ ನಿರೀಕ್ಷೆ ಕಡೆಗೂ ಹುಸಿಯಾಗಿದೆ.ಯಡಿಯೂರಪ್ಪ ಸಂಪುಟದ ಶ್ಯಾಡೋ ಕ್ಯಾಬಿನೆಟ್ ರೀತಿಯಲ್ಲೇ ಬೊಮ್ಮಾಯಿ ಸಂಪುಟ ರಚನೆಯಾಗಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಸರ್ಕಾರ ಬದಲಾದರೂ ಅವಕಾಶ ವಂಚಿತ ಜಿಲ್ಲೆಗಳ ಅದೃಷ್ಟ ಬದಲಾಗಲಿಲ್ಲ, ಯಡಿಯೂರಪ್ಪ ಹೋಗಿ ಬೊಮ್ಮಾಯಿ ಬಂದರೂ ಅವಕಾಶ ವಂಚಿತ ಜಿಲ್ಲೆಗಳಿಗೆ ಯಾವ ಲಾಭವೂ ಆಗದಂತಾಗಿದೆ. ಸದ್ಯ ಸಂಪುಟದಲ್ಲಿ 4 ಸ್ಥಾನ ಖಾಲಿ ಇದ್ದು, ಅವು ಯಾವ ಜಿಲ್ಲೆಗೆ ದಕ್ಕಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.