ಬೆಂಗಳೂರು: ಸರ್ಕಾರ ಆಡಳಿತ ಸುಧಾರಣೆ ಹಿನ್ನೆಲೆ ಇದೀಗ ವೆಚ್ಚ ಕಡಿತ, ಹುದ್ದೆ ಕಡಿತದ ಲೆಕ್ಕಾಚಾರದಲ್ಲಿದೆ. ಈ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ಈಗಾಗಲೇ ವರದಿ ಸಿದ್ಧಪಡಿಸುತ್ತಿದೆ. ಇತ್ತ ಸರ್ಕಾರಿ ನೌಕರರಿಗೆ ಹುದ್ದೆ ಕಡಿತದ ಆತಂಕ ಶುರುವಾಗಿದೆ.
ಆರ್ಥಿಕ ಸಂಕಷ್ಟದ ಹಿನ್ನೆಲೆ ರಾಜ್ಯ ಸರ್ಕಾರ ಇದೀಗ ವೆಚ್ಚ ಕಡಿತದ ಮೊರೆ ಹೋಗಿದೆ. ಅದಕ್ಕಾಗಿ ಸರ್ಕಾರ ವಿವಿಧ ಇಲಾಖೆ, ಕಚೇರಿಗಳ ವಿಲೀನ, ಹುದ್ದೆ ಕಡಿತದ ಚಿಂತನೆಯಲ್ಲಿದೆ.
ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ಸಂಪುಟ ಉಪ ಸಮಿತಿ ಈಗಾಗಲೇ ಈ ಸಂಬಂಧ ಎಲ್ಲಾ ಇಲಾಖೆಗಳು, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯಿಂದ ವರದಿ ತರಿಸಿಕೊಳ್ಳುತ್ತಿದೆ. ಅದರಂತೆ ಸಚಿವಾಲಯದಲ್ಲಿನ ಕೆಲ ಹುದ್ದೆಗಳನ್ನು ಕಡಿತಗೊಳಿಸುವ ಬಗ್ಗೆಯೂ ಪ್ರಸ್ತಾಪ ಇದೆ.
ಸಚಿವಾಲಯದ ಹುದ್ದೆ ಕಡಿತ ಎಷ್ಟು?:
ಸಚಿವಾಲಯದಲ್ಲಿನ ವಿವಿಧ ಇಲಾಖೆಗಳ ಹುದ್ದೆ ಕಡಿತದ ಬಗ್ಗೆಯೂ ಪ್ರಸ್ತಾಪ ಇದೆ. ಪ್ರಸ್ತುತ 6ನೇ ವೇತನ ಆಯೋಗದ 2ನೇ ಸಂಪುಟದ ಶಿಫಾರಸಿನ ಕಿರಿಯ ಸಹಾಯಕರು/ಬೆರಳಚ್ಚುಗಾರರು ಮತ್ತು ಶೀಘ್ರ ಲಿಪಿಗಾರರ ವೃಂದದ ಹುದ್ದೆಗಳನ್ನು ಕಡಿತ ಅಥವಾ ರದ್ದುಗೊಳಿಸುವ ಬಗ್ಗೆ ಪ್ರಸ್ತಾಪ ಇದೆ. ಅದರಂತೆ ಸಚಿವಾಲಯದಲ್ಲಿನ 542 ಕಿರಿಯ ಸಹಾಯಕರಿಗೆ ಹುದ್ದೆ ಕಡಿತದ ಆತಂಕ ಎದುರಾಗಿದೆ.
ಸಚಿವಾಲಯದಲ್ಲಿ ಗ್ರೂಪ್ ಬಿ ವೃಂದದಲ್ಲಿ ಮಂಜೂರಾತಿ ಪಡೆದ 53 ಗೆಜೆಟೆಡ್ ಆಪ್ತ ಸಹಾಯಕರಿದ್ದು, ಆ ಪೈಕಿ 46 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರೂಪ್ ಸಿ ವೃಂದದಲ್ಲಿ ಮಂಜೂರಾತಿ ಪಡೆದ ಹಿರಿಯ ಸ್ಟೆನೋಗ್ರಾಫರ್ 57 ಹುದ್ದೆಗಳ ಪೈಕಿ 31 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾತಿ ಪಡೆದ 408 ಸ್ಟೆನೋಗ್ರಾಫರ್ ಹುದ್ದೆಯಲ್ಲಿ 204 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಜೂರಾತಿ ಪಡೆದ 313 ಹಿರಿಯ ಟೈಪಿಸ್ಟ್ ಹುದ್ದೆ ಪೈಕಿ 30 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾತಿ ಪಡೆದ 542 ಕಿರಿಯ ಸಹಾಯಕರ ಹುದ್ದೆ ಪೈಕಿ 187 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಈ ಹುದ್ದೆ ಕಡಿತದ ಆತಂಕ ಎದುರಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈಗಾಗಲೇ ಹುದ್ದೆ ಕಡಿತ ಬೇಡ ಎಂದು ವರದಿ ನೀಡಿದೆ. ಆದರೂ ಸಂಪುಟ ಉಪ ಸಮಿತಿ ಹುದ್ದೆ ಕಡಿತದ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ತಿಳಿಸಿದ್ದಾರೆ.
ಸಚಿವಾಲಯ ಬಂದ್ ಮಾಡಿ ಪ್ರತಿಭಟಿಸಲು ಚಿಂತನೆ:
ವೆಚ್ಚ ಕಡಿತ ಹಾಗೂ ಹುದ್ದೆ ಕಡಿತವನ್ನು ವಿರೋಧಿಸಿ ರಾಜ್ಯ ಸರ್ಕಾರಿ ನೌಕರರು ಜೂ. 4ರಂದು ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವಿಧಾನಸೌಧದಲ್ಲಿ ಕಪ್ಪು ಪಟ್ಟಿ ಧರಿಸಿ ನೌಕರರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ಮಲ್ಲಿ ಈಗಾಗಲೇ ಮಂಜೂರಾತಿ ಹುದ್ದೆಗಳಿಗಿಂತ ಕಡಿಮೆ ಹುದ್ದೆ ಭರ್ತಿಯಾಗಿದೆ. ಸಿಬ್ಬಂದಿ ಕೊರತೆಯ ಮಧ್ಯೆಯೂ ನಾವು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಆಡಳಿತಾತ್ಮಕ ವೆಚ್ಚ ಕಡಿತ ಮಾಡಬೇಕೆನ್ನುವುದಾದರೆ ಮೇಲಿನ ಮಟ್ಟದಲ್ಲಿ ಮಾಡಲಿ.
ಹೆಚ್ಚುವರಿ ಐಎಎಸ್ ಅಧಿಕಾರಿಗಳಿದ್ದಾರೆ. ಅವರ ಹುದ್ದೆ ಕಡಿತ ಮಾಡಿ. ಇದು ಗ್ರೂಪ್ ಸಿ ವೃಂದದ ನೌಕರರ ವಿರುದ್ಧದ ಐಎಎಸ್ ಅಧಿಕಾರಿಗಳ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಪುಟ ಉಪ ಸಮಿತಿ ಅಧ್ಯಕ್ಷ, ಕಂದಾಯ ಸಚಿವ ಆರ್.ಅಶೋಕ್ಗೆ ಹುದ್ದೆ ಕಡಿತ ಮಾಡದಂತೆ ಮನವಿ ಮಾಡಲಿದ್ದೇವೆ. ಒಂದು ವೇಳೆ ಹುದ್ದೆ ಕಡಿತ ಮಾಡುವುದಾದರೆ ಸಚಿವಾಲಯ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪಿ.ಗುರುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.