ಬೆಂಗಳೂರು: ಅಕ್ರಮವಾಗಿ ರಕ್ತಚಂದನವನ್ನು (ರೆಡ್ ಸ್ಯಾಂಡಲ್) ಹೊರ ರಾಜ್ಯಗಳಿಗೆ ಸಾಗಣೆ ಮಾಡುತ್ತಿದ್ದ ಒಟ್ಟು 42 ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ (ಕೋಕಾ) ಅಸ್ತ್ರ ಪ್ರಯೋಗಿಸಿದ್ದು, ಇದರಲ್ಲಿ 18 ಜನರನ್ನು ಬಂಧಿಸಿದ್ದಾರೆ.
ಕಳೆದ ತಿಂಗಳ 17 ರಂದು ನಗರ ಹಾಗೂ ಹೊರವಲಯದಲ್ಲಿ ಬೀಡು ಬಿಟ್ಟಿದ್ದ ಬೃಹತ್ ರಕ್ತಚಂದನ ಸ್ಮಗ್ಲಿಂಗ್ ಜಾಲವನ್ನು ಸಿಸಿಬಿ ಭೇದಿಸಿತ್ತು. ದಾಳಿ ವೇಳೆ ಸುಮಾರು 4000 ಕೆಜಿ ರೆಡ್ ಸ್ಯಾಂಡಲ್ ಪತ್ತೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಗಣೆ ಮಾಡ್ತಿದ್ದ ಅಬ್ಧುಲ್ ರಶೀದ್ ಹಾಗೂ 14 ಮಂದಿ ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿತ್ತು. ತದ ನಂತರ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.
ಆರೋಪಿಗಳು ನೀಡಿದ ಸುಳಿವಿನ ಆಧಾರದ ಮೇಲೆ ಮುಂಬೈನ ಅಂಧೇರಿಯಲ್ಲಿ 1000 ಕೆಜಿ ರೆಡ್ ಸ್ಯಾಂಡಲ್ ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದರು. ಹತ್ತಾರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಒಡಾಡುತ್ತಿದ್ದ ಆರೋಪಿಗಳ ವಿರುದ್ಧ ಕೋಕಾ ಅಸ್ತ್ರ ಪ್ರಯೋಗಿಸಿದ್ದು, ಈ ಮೂಲಕ ರೆಡ್ ಸ್ಯಾಂಡಲ್ ಜಾಲದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮುಂಬೈ ಸೇರಿದಂತೆ ಹಲವು ರಾಜ್ಯಗಳಿಗೆ ಬೇಕಾಗಿದ್ದ ಆರೋಪಿಗಳಿಗೆ ಬಿಸಿ ಮುಟ್ಟಿಸಲು ರೆಡಿಯಾಗಿದೆ.
ಕೋಕಾ ಕಾಯ್ದೆ ಎಂದರೇನು?
ಇಬ್ಬರು ಮತ್ತು ಅದಕ್ಕಿಂತ ಹೆಚ್ಚು ಜನ ಒಟ್ಟಿಗೆ ಸೇರಿ ಮಾಡುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಬಳಕೆಯಾಗಲಿರುವ ಕಾಯಿದೆಯೇ ಕೋಕಾ ಕಾಯಿದೆ.
ಇದರನ್ವಯ ಆರೋಪಿಗಳಿಗೆ ಮಾಮೂಲಿ ಪ್ರಕರಣಗಳಂತೆ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಕನಿಷ್ಠ ಆರು ತಿಂಗಳವರೆಗೂ ಜಾಮೀನು ಸಿಗುವುದು ಕಷ್ಟ. ಕೋಕಾ ಕಾಯ್ದೆಯಡಿ ಜೈಲು ಸೇರಿದ್ರೆ ಜೀವನ ಪರ್ಯಂತ ಜೈಲಾಗಬಹುದು. ಅಥವಾ ಐದು ಲಕ್ಷದವರೆಗೂ ದಂಡ ಹಾಗೂ ಎರಡನ್ನೂ ವಿಧಿಸಬಹುದು. ಕೋಕಾ ಪ್ರಕರಣಗಳ ವಿಚಾರಣೆ ಸಹ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಕೋಕಾ ಆಕ್ಟ್ನಲ್ಲಿ ಆರೋಪಿಗಳನ್ನು ಗರಿಷ್ಠ 30 ದಿನ ವಿಚಾರಣೆಗೆ ವಶಕ್ಕೆ ಪಡೆಯಲು ಪೊಲೀಸರಿಗೆ ಅವಕಾಶ ಇರಲಿದೆ.