ಬೆಂಗಳೂರು: ನಮ್ಮ ಮೆಟ್ರೋ ಸೇವೆ ನಗರಕ್ಕೆ ಬಂದಿದ್ದೇ ಬಂದಿದ್ದು. ಪ್ರತಿದಿನ ಲಕ್ಷಾಂತರ ಜನರು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸುಖಕರವಾಗಿ ಪ್ರಯಾಣಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನಿನ್ನೆ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿ ರೆಕಾರ್ಡ್ ಬ್ರೇಕ್ ಆಗಿದೆ.
ನಿನ್ನೆ ಒಂದೇ ದಿನ ನಮ್ಮ ಮೆಟ್ರೋ ಸೇವೆಯನ್ನ 4,58,238 ಪ್ರಯಾಣಿಕರು ಪಡೆದಿದ್ದಾರೆ. ಈ ಮೂಲಕ ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿದಿದೆ. ಏಪ್ರಿಲ್ ತಿಂಗಳ 5 ರಂದು 4,52,563 ಪ್ರಯಾಣಿಕರು ಪ್ರಯಾಣಿಸಿ ದಾಖಲೆ ಸೃಷ್ಟಿ ಮಾಡಿತ್ತು. ನಂತರ ಇದೇ ಆಗಸ್ಟ್ 14ರಂದು 4,53,744 ಜನ ಪ್ರಯಾಣಿಸಿದ್ದರು.
ಈಗ ಈ ಹಿಂದಿನ ಎರಡು ದಾಖಲೆಯನ್ನು ದಾಟಿ, ನಿನ್ನೆ ಒಂದೇ ದಿನ 4,58,238 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದೆ.
ಮೈಸೂರು ರಸ್ತೆ- ದೀಪಾಂಜಲಿನಗರ ಮೆಟ್ರೋ ರೈಲು ಎರಡು ನಿಮಿಷ ಸ್ಥಗಿತ.
ತಾಂತ್ರಿಕ ದೋಷದಿಂದ ಎರಡು ನಿಮಿಷಗಳ ಕಾಲ ಮೆಟ್ರೋ ಓಡಾಟ ಸ್ಥಗಿತಗೊಂಡಿತ್ತು. ಮೈಸೂರು ರಸ್ತೆ- ದೀಪಾಂಜಲಿನಗರ ಮೆಟ್ರೊ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿತ್ತು. ನಿನ್ನೆ ಸಂಜೆ 6.33ಕ್ಕೆ ಸ್ಥಗಿತಗೊಂಡಿದ್ದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಸಮಸ್ಯೆ ಸರಿಪಡಿಸಿದ್ದು, ದಿಢೀರನೆ ಮೆಟ್ರೋ ರೈಲು ನಿಂತಿದ್ದಕ್ಕೆ ಕೆಲ ಕಾಲ ಪ್ರಯಾಣಿಕರು ಆತಂಕ್ಕೊಳಗಾಗಿದ್ದರು. ರೈಲು ನಿಂತಾಗ ಪ್ರಯಾಣಿಕರನ್ನು ಕೆಳಗಿಳಿಸಿ ತಾಂತ್ರಿಕ ಸಮಸ್ಯೆ ಪರಿಶೀಲಿಸಿ ಬಗೆಹರಿಸಿದ್ದಾರೆ. ಸದ್ಯ ಈಗ ಎಲ್ಲಾ ಮಾರ್ಗಗಳಲ್ಲೂ ಮೆಟ್ರೋ ರೈಲುಗಳು ಸಂಚರಿಸುತ್ತಿವೆ.