ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲದೇ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್. ದೊರೆಸ್ವಾಮಿ ಈಗ ನಿಶ್ಯಕ್ತಿ ಮತ್ತಿತರ ದೈಹಿಕ ಅಸ್ವಸ್ಥತೆಯ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದು, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ತಮ್ಮ 104ನೇ ವರ್ಷದ ಜನ್ಮದಿನ ಆಚರಿಸಿಕೊಂಡ ದೊರೆಸ್ವಾಮಿ ಅಪಾರ ಜೀವನೋತ್ಸಾಹಿ ಮತ್ತು ಅಪರಿಮಿತ ಆಶಾವಾದಿಯಾಗಿದ್ದು, ಕಳೆದ ಒಂದೆರಡು ವರ್ಷಗಳಿಂದ ಮನೆಯಿಂದ ಹೊರಗಡೆ ಹೋಗಿ ಹೋರಾಟಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ ಆಗುತ್ತಾ ಬಂದಿದ್ದರೂ, ಕೊರೊನಾ ವೈರಸ್ ಸೋಂಕಿನ ಕಾಲದಲ್ಲಿ ಸ್ವಾಭಾವಿಕವಾಗಿ ಬಹುತೇಕ ಸಾರ್ವಜನಿಕ ಚಟುವಟಿಕೆ ಕಡಿಮೆಯಾದವು. ಮನೆಗೆ ಹೋಗಿ ಭೇಟಿ ಮಾಡುವವರ ಸಂಖ್ಯೆಯೂ ಸಹಜವಾಗಿಯೇ ಕಡಿಮೆ ಆಗಿತ್ತು.
ಕ್ರಿಯಾಶೀಲತೆ ಮತ್ತು ಉತ್ಸಾಹದ ಖನಿಯಾದ ದೊರೆಸ್ವಾಮಿಯವರು ಕಳೆದ ಒಂದೂಕಾಲು ವರ್ಷದ ಈ ಕೋವಿಡ್-19 ನಿರ್ಬಂಧಗಳ ಅವಧಿಯಲ್ಲಿ ಒಂದು ರೀತಿಯ ಬಂಧನ ಮತ್ತು ತುಮುಲವನ್ನು ಸಹಜವಾಗಿಯೆ ಅನುಭವಿಸಿರುತ್ತಾರೆ. ಅದು ಒಂದು ರೀತಿಯಲ್ಲಿ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಅವರಿಗೆ ಸರಿಯಾಗಿ ಊಟ ಸೇರುತ್ತಿಲ್ಲ. ಜೊತೆಗೆ ಸ್ವಲ್ಪ ಹರ್ನಿಯಾ ಸಮಸ್ಯೆ ಇದ್ದಹಾಗೆ ಇದೆ. ಒಂದೆರಡು ದಿನದಲ್ಲಿ ಎಲ್ಲಾ ಸರಿ ಹೋಗಬಹುದು ಎನ್ನುವ ಆಶಾವಾದ ನಮ್ಮದು ಎಂದು ಆಸ್ಪತ್ರೆಗೆ ಭೇಟಿ ನೀಡಿ ಬಂದ ಹೋರಾಟಗಾರರು ತಿಳಿಸಿದ್ದಾರೆ.