ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯಣ್ಣ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅಗಲಿ ಇವತ್ತಿಗೆ ಎರಡು ವರ್ಷ ತುಂಬುತ್ತಿದೆ. ಈ ಹಿನ್ನೆಲೆ ಸುಮಲತಾ ಅಂಬರೀಶ್, ಮಗ ಅಭಿಷೇಕ್, ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ, ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದರು.
ರೆಬೆಲ್ ಸ್ಟಾರ್ ಅಂಬರೀಶ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಎರಡನೇ ವರ್ಷದ ಪುಣ್ಯತಿಥಿಯನ್ನು ಅಭಿಮಾನಿಗಳು ವಿನೂತನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪುಟ್ಟಸ್ವಾಮಿ, ಅಂಬಿ ಪುಟ್ಟಣ್ಣ ಎಂಬ ಯುವಕ ಹಾಗೂ ಅವರ ತಂಡ ಅಪ್ಪಟ ಅಂಬರೀಷ್ ಅಭಿಮಾನಿಗಳಾಗಿದ್ದು, ಅವರ 50 ಕ್ಕೂ ಹೆಚ್ಚು ಚಿತ್ರಗಳ ಪೋಷಾಕುಗಳನ್ನು ಸ್ವಂತ ದುಡ್ಡಿನಲ್ಲಿ ಖರೀದಿಸಿ, ಸಂಗ್ರಹಿಸಿ, ಅಭಿನಯವನ್ನೂ ಮಾಡುತ್ತಾ ಬರುತ್ತಿದ್ದಾರೆ.
ಇಂದು ಸಮಾಧಿಯ ಮುಂದೆ 'ಭಂಡ ನನ್ನ ಗಂಡ' ಅಂಬಿ ಅಭಿನಯದ ಪ್ರಖ್ಯಾತ ಚಲನಚಿತ್ರದ ಮದಕರಿ ನಾಯಕರ ಪಾತ್ರದ ತುಣುಕು ಪ್ರದರ್ಶಿಸಿ ಅತ್ಯದ್ಭುತವಾಗಿ ನಟಿಸಿದರು. ಪುಟ್ಟಸ್ವಾಮಿ ಮಾತನಾಡಿ, ನಾವು ದಾನ ಶೂರ ಕರ್ಣ ಅಂಬಿಯಣ್ಣನ ಅಪ್ಪಟ ಅಭಿಮಾನಿಗಳು. ಎಷ್ಟೇ ಸೇವೆ ಮಾಡಿದರೂ ಅವರ ಋಣ ತೀರಿಸಲು ಆಗಲ್ಲ. ಅವರ ದೇವಸ್ಥಾನ ಆಗುತ್ತಿರುವುದು ತುಂಬಾ ಸಂತಸವಾಗುತ್ತಿದೆ. ಅಣ್ಣನ ಅಭಿಮಾನಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ. ಅವರಿಗಾಗಿ ಎಂತಹ ತ್ಯಾಗಕ್ಕೂ ಸಿದ್ದ ಎಂದರು.
ಅಭಿಮಾನಿಗಳು ಸಾಗರೋಪಾದಿಯಲ್ಲಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಆಟೋ ಚಾಲಕರು ಅಂಬಿ ಫೋಟೋವನ್ನು ಆಟೋಗಳ ಮೇಲೆ ಅಲಂಕರಿಸಿ, ಹೂವು ಹಾರಗಳಿಂದ ಸಿಂಗರಿಸಿ ಸಿಹಿ ಹಂಚಿದರು. ಜೊತೆಗೆ ಸಮಾಧಿ ಬಳಿ ಅನ್ನ ಸಂತರ್ಪಣೆ ಕಾರ್ಯವೂ ನಡೆಯಿತು.