ಬೆಂಗಳೂರು : ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಬಿಬಿಎಂಪಿ ವ್ಯಾಪ್ತಿಯ ಅನರ್ಹ ಶಾಸಕರು ಸಭೆ ನಡೆಸಿದರು.
ನಗರದಲ್ಲಿರುವ ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಸಭೆ ನಡೆದಿದ್ದು, ಮೇಯರ್ ಆಯ್ಕೆಗೆ ಚುನಾವಣೆ ನಡೆಯುವ ಹಿನ್ನೆಲೆ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು ಸಭೆಯಲ್ಲಿ ಪಾಲ್ಗೊಂಡು ಮಾತುಕತೆ ನಡೆಸಿದರು. ಅಲ್ಲದೆ ಬಿಜೆಪಿಯ ಮೇಯರ್, ಉಪಮೇಯರ್ ಅಭ್ಯರ್ಥಿಗಳಿಗೆ ಪರವಾಗಿರುವ ಐದಾರು ಕಾರ್ಪೋರೇಟರ್ಸ್ಗಳು ಮತ ಹಾಕಿದರೂ ಬಿಜೆಪಿ ಗೆಲವು ಶತಸಿದ್ಧ. ಹೀಗಾಗಿ ಅನರ್ಹರ ಬೆಂಬಲಿಗ ಸದಸ್ಯರ ಮತಕ್ಕೆ ಮನವಿ ಮಾಡಿದರು. ಅನರ್ಹ ಶಾಸಕರ ಸಭೆಗೆ ಡಿಸಿಎಂ ಅಶ್ವತ್ ನಾರಾಯಣ ಆಗಮಿಸಿದ್ದು, ವಿಶೇಷವೆನಿಸಿತು.
ಸಭೆ ಬಳಿಕ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿ, ಅ.22ಕ್ಕೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಇದೆ. ಇಂದು ನಡೆದ ಸಭೆಯಲ್ಲಿ ಕೋರ್ಟ್ನಲ್ಲಿರುವ ನಮ್ಮ ಪ್ರಕರಣದ ಹಾಗೂ ಬೈ ಎಲೆಕ್ಷನ್ ವಿಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಎಲೆಕ್ಷನ್ ಅಂದ್ಮೇಲೆ ನಮ್ಮ ಕ್ಷೇತ್ರ ಆಗಿರಬಹುದು, ಇತರೆ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳು ಇರುತ್ತವೆ ಎಂದರು.
ಬಿಜೆಪಿಯವರ ಬಗ್ಗೆ ನಾನೀಗ ಮಾತಾಡಲ್ಲ. ನಾವು ಅನರ್ಹರಾಗಿದ್ದೇವೆ. ಅನರ್ಹರಾಗೋ ಬಗ್ಗೆ ಚರ್ಚೆ ಮಾಡಿದ್ದೇವೆ. ಅಶ್ವತ್ಥ್ ನಾರಾಯಣ ಯಾಕೆ ಇಲ್ಲಿಗೆ ಬಂದಿದ್ದಾರೋ ಗೊತ್ತಿಲ್ಲ. ನಾವು ಬಿಜೆಪಿಗೆ ಹೋಗಿಲ್ಲ. ನಮ್ಮ ವಿರುದ್ಧವಾಗಿ ಮಾತನಾಡೋರ ಬಾಯಿಗೆ ಸಕ್ಕರೆ ಹಾಕೋಣ ಎಂದು ತಿಳಿಸಿದರು.
ಇನ್ನು ಈ ಸಭೆಯಲ್ಲಿ ಅನರ್ಹ ಶಾಸಕ ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ಬಿ.ಸಿ.ಪಾಟೀಲ್ ಭಾಗಿಯಾಗಿದ್ದರು.