ಮುಂಬೈ : ಅತೃಪ್ತ ಶಾಸಕರು ಮತ್ತೆ ವಿಡಿಯೋ ಸಂದೇಶ ಕಳುಹಿಸುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಮತ್ತಷ್ಟು ಕುತೂಹಲ ಮೂಡಿಸಿದೆ. ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಕಳುಹಿಸಿರುವ ಅತೃಪ್ತರು, ನಾವು 13 ಶಾಸಕರು ಒಗ್ಗಟ್ಟಾಗಿದ್ದು, ಅಧಿವೇಶನಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಯಾರು ಏನ್ ಹೇಳಿದ್ರು?
ಎಸ್.ಟಿ.ಸೋಮಶೇಖರ್
ನಮಗೆ ಗನ್ ಇಟ್ಟು ಯಾರೂ ಹೆದರಿಸುತ್ತಿಲ್ಲ. ಎಂಟಿಬಿ ನಾಗರಾಜ್, ನಾರಾಯಣ ಗೌಡರ ಹುಟ್ಟುಹಬ್ಬವನ್ನು ನಾವು ಒಗ್ಗಟ್ಟಾಗಿ ಆಚರಿಸಿದ್ದೇವೆ. 13 ಶಾಸಕರು ಜೀವಂತರಾಗಿದ್ದೇವೆ. ಮೊನ್ನೆ ಸದನದಲ್ಲಿ ಒಬ್ಬ ಶಾಸಕರು ಅತೃಪ್ತರು ಜೀವಂತವಾಗಿದ್ದಾರಾ ಎಂದು ಕೇಳಿದ್ದರು. ನಾವು ಎಲ್ಲರೂ ಜೀವಂತವಾಗಿದ್ದೇವೆ. ಹೀಗಾಗಿ ಈ ವಿಡಿಯೋ ಸಂದೇಶ ಕಳುಹಿಸಿದ್ದೇವೆ. ನಾವೆಲ್ಲರೂ ಆರೋಗ್ಯವಂತರಾಗಿದ್ದೇವೆ. ನಾವು ಸ್ವಇಚ್ಚೆಯಿಂದ ಇಲ್ಲಿದ್ದೇವೆ.
ವಿಶ್ವನಾಥ್
ಸಮ್ಮಿಶ್ರ ಸರ್ಕಾರದ ಹೆಸರಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದ್ದು, ಇದರಿಂದ ಜನರಿಗೆ ಯಾವುದೇ ಉಪಯೋಗ ಆಗುತ್ತಿಲ. ಈ ರಾಕ್ಷಸ ರಾಜಕಾರಣಕ್ಕೆ ಕಾಯಕಲ್ಪ ನೀಡಲು, ನಾವು ನಮ್ಮ ಪದ ತ್ಯಾಗ ಮಾಡಿದ್ದೇವೆ. ಜನತಂತ್ರ ರಕ್ಷಿಸಲು ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಮಿಶ್ರ ರಾಜಕಾರಣವೂ ಇಲ್ಲ, ರಾಜಧರ್ಮವೂ ಇಲ್ಲ. ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ತತ್ವ ಸಿದ್ಧಾಂತ ಆಧಾರದಲ್ಲಿ ರಾಜೀನಾಮೆ ನೀಡಿದ್ದೇವೆ. ಯಾವುದೇ ಆಮಿಷಕ್ಕೆ ಒಳಗಾಗಿಲ್ಲ.
ಭೈರತಿ ಬಸವರಾಜು
ನಾವೆಲ್ಲರೂ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ತಿಳಿಸಲಿದ್ದೇವೆ. ಅಧಿಕಾರಕ್ಕಾಗಿ ನಾವು ಇಲ್ಲಿಗೆ ಬಂದಿಲ್ಲ. ಸ್ವಾಭಿಮಾನಕ್ಕಾಗಿ ಬಂದಿದ್ದೇವೆ. ಯಾರ ದುಡ್ಡಿಗೂ ನಾವು ಇಲ್ಲಿಗೆ ಬಂದಿಲ್ಲ. ಸ್ವಾಭಿಮಾನದ ಕಿಚ್ಚು ನಮ್ಮಲ್ಲಿ ಕಾಡುತ್ತಿದೆ. ಅಧಿವೇಶನಕ್ಕೆ ನಾವು ಬರುವುದಿಲ್ಲ.
ಗೋಪಾಲಯ್ಯ
ಸರ್ಕಾರ ಬಂದ ಮೇಲೆ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿದ್ದೇವೆ. ಸ್ವಾಭಿಮಾನಕ್ಕೆ ಧಕ್ಕೆ ಆದ ಹಿನ್ನೆಲೆ ಬಂದಿದ್ದೇವೆ. ಯಾವುದೇ ಆಮಿಷಕ್ಕೆ ಒಳಗಾಗಿಲ್ಲ.
ಬಿಸಿ ಪಾಟೀಲ್
ನಾವು ಸ್ವಾಭಿಮಾನಕ್ಕಾಗಿ ಬದುಕುವವರು. ಸ್ವಾಭಿಮಾನಕ್ಕಾಗಿ ತ್ಯಾಗ ಮಾಡುತ್ತೇವೆ. ಆಸೆ, ಆಮಿಷಕ್ಕೆ ಬಲಿಯಾಗಿಲ್ಲ. ಯಾರ ಒತ್ತಡವೂ ನಮ್ಮ ಮೇಲಿಲ್ಲ. ನಾವು ಯಾವುದೇ ಕಾರಣಕ್ಕೂ ಅಧಿವೇಶನದಲ್ಲಿ ಪಾಲ್ಗೊಳಲ್ಲ. ಇದು ಸತ್ಯ.