ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅನರ್ಹಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಶಾಸಕರು ಸೋಮವಾರ ಇಲ್ಲವೇ ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಮುಂಬೈನ ಹೋಟೆಲ್ ನಲ್ಲಿ ವಾಸವಾಗಿದ್ದ ಬೆಂಗಳೂರಿನ ಶಾಸಕರು ಭಾನುವಾರ ತಡರಾತ್ರಿ ಬಂದಿದ್ದಾರೆ. ಉಳಿದವರು ಇಂದು ಆಗಮಿಸುವ ಸಾಧ್ಯತೆ ಇದೆ.ರಮೇಶ್ ಜಾರಕಿಹೊಳಿ, ಎಚ್. ವಿಶ್ವನಾಥ್ ಸೇರಿದಂತೆ ಉಳಿದ ಶಾಸಕರು ಸೋಮವಾರ ದೆಹಲಿಗೆ ತೆರಳಿ ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಅನರ್ಹಗೊಳಿಸಿರುವ ತೀರ್ಪಿಗೆ ತಕ್ಷಣಕ್ಕೆ ತಡೆಯಾಜ್ಞೆ ತಂದು ಆ ನಂತರ ಅವರ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ.

ಅತೃಪ್ತರೆಲ್ಲರೂ ಒಟ್ಟಾಗಿ ಸಮಾಲೋಚಿಸಿ ನಂತರ ತೆರಳಲು ಯೋಚಿಸಿದರೆ ಅರ್ಜಿ ಸಲ್ಲಿಕೆ ಮಂಗಳವಾರಕ್ಕೆ ತೆರಳುವ ಸಾಧ್ಯತೆ ಇದೆ.ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಈ ಸಂಬಂಧ ಮಾಹಿತಿ ನೀಡಿದ್ದು, ಸ್ಪೀಕರ್ ಯಾವುದೋ ಒತ್ತಡಕ್ಕೆ ಮಣಿದು ಆದೇಶ ನೀಡಿದ್ದಾರೆ. ಅವರ ಆದೇಶ ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇವೆ. ಒಂದೊಮ್ಮೆ ಎಷ್ಟೇ ವಿಳಂಬವಾದರೂ ಮಂಗಳವಾರದವರೆಗೆ ಅರ್ಜಿ ಸಲ್ಲಿಕೆ ಆಗಲಿದೆ. ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.