ಬೆಂಗಳೂರು: ರಾಜಧಾನಿಯ ಆಡಳಿತ ಕೇಂದ್ರ ಬಿಬಿಎಂಪಿ ಚುನಾವಣೆ ನಡೆಸಲು ನಾವು ಸಿದ್ಧ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಹೈಕೋರ್ಟ್ ಆದೇಶ ಕುರಿತು ನಗರದಲ್ಲಿಂದು ಪ್ರತಿಕ್ರಿಯಿಸಿ ಆಯುಕ್ತರು, ವಾರ್ಡ್ ವಿಂಗಡಣೆ ಬಗ್ಗೆ ತಕರಾರು ಎತ್ತಿ ಕೋರ್ಟ್ಗೆ ಅರ್ಜಿ ಹಾಕಿದ್ದರು. ಕೋರ್ಟ್ ಆ ಅರ್ಜಿಯನ್ನ ವಜಾ ಮಾಡಿದೆ. ಈಗ ಇರುವುದು ಮೀಸಲಾತಿ ಪಟ್ಟಿ ವಿಚಾರಣೆ ಮಾತ್ರ. ಮೀಸಲಾತಿ ಪಟ್ಟಿಗೂ ನಮಗೂ ಸಂಬಂಧ ಇಲ್ಲ, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರುವ ಹಿನ್ನೆಲೆ ಚುನಾವಣೆ ನಡೆಸಲು ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಗೊಂದಲವಿಲ್ಲ: ಚುನಾವಣಾ ಆಯೋಗ ಯಾವಾಗ ದಿನಾಂಕ ಹೇಳಿದರೂ ನಾವು ಸಿದ್ಧ. ಇನ್ನೂ, ಮತದಾರರ ಪಟ್ಟಿಯನ್ನು ಕೂಡ ಅಂತಿಮಗೊಳಿಸಿ ಪ್ರಕಟಿಸಿದ್ದೇವೆ. ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿ ಗೊಂದಲ ಇಲ್ಲ ಎಂದು ವಿವರಿಸಿದರು.
2011ರ ಜನಗಣತಿ ಪ್ರಕಾರ ಮತದಾನ : 2011ರ ಜನಗಣತಿ ಪ್ರಕಾರವೇ ಮತದಾರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಸಂಬಂಧ ನಮ್ಮ ಕಡೆಯಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಹೈಕೋರ್ಟ್ ಆದೇಶ ಪರಿಶೀಲಿಸಿ ಬಿಬಿಎಂಪಿ ಚುನಾವಣೆ : ಬಿಬಿಎಂಪಿ ಚುನಾವಣೆ ಸಂಬಂಧ ಹೈ ಕೋರ್ಟ್ ಆದೇಶ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಮಾಡಿದೆ. ಅದರ ಪೂರ್ಣ ಮಾಹಿತಿ ಸಿಕ್ಕಿಲ್ಲ. ಇರೋ ಮಾಹಿತಿ ಪ್ರಕಾರ ಡಿಸೆಂಬರ್ 30ರೊಳಗೆ ಚುನಾವಣೆ ಮೀಸಲಾತಿ ನೀಡಲು ತಿಳಿಸಿದೆ. ಕ್ಯಾಟಗರಿ, ಬ್ಯಾಕ್ ವರ್ಡ್ ಮೀಸಲಾತಿ ಕೊಡಬೇಕಿದೆ. ಕೋರ್ಟ್ ಪ್ರತಿ ಪಡೆದು ತೀರ್ಮಾನ ಮಾಡುತ್ತೇವೆ. ಸರ್ಕಾರ ಚುನಾವಣೆ ಮಾಡಲು ಹಿಂದೇಟು ಹಾಕಲ್ಲ. ಕೋರ್ಟ್ ಆದೇಶದ ಮೇರೆಗೆ ನ್ಯಾಯಯುತವಾಗಿ ಒಬಿಸಿ ಮೀಸಲು ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. ಮುಂದೆ ನಡೆಯುವ ಅಂತಿಮ ತೀರ್ಪು ನೋಡಿ ಅಂತಿಮ ನಿರ್ದೇಶನ ನೀಡುತ್ತೇವೆ ಎಂದರು.
ರಾಹುಲ್ ಹೋದಲ್ಲಿ ಬಿಜೆಪಿಗೆ ಗೆಲುವು: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕೇರಳದಿಂದ ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಬಂದಿದೆ. ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ. ಚರ್ಚ್ ಫಾದರ್ ಒಬ್ಬರು ಭಾರತ ನೆಲ ತುಳಿಯಲ್ಲ, ಅಪವಿತ್ರ ಭೂಮಿ ಅದಕ್ಕೆ ಚಪ್ಪಲಿ ಹಾಕ್ತೀನಿ ಅಂತ ಹೇಳಿದ್ದಾರೆ. ಅವರಿಂದ ಆಶೀರ್ವಾದ ಪಡೆದು ಬಂದಿದ್ದಾರೆ ಎಂದು ಟೀಕಿಸಿದರು.
ಭಾರತದಲ್ಲಿರುವ ಮಠ, ಮಂದಿರಕ್ಕೆ ಹೋಗಬೇಕಿತ್ತು. ಅದು ಬಿಟ್ಟು ಭಾರತ ನೆಲದ ಬಗ್ಗೆ ಕೀಳು ಹೇಳಿಕೆ ನೀಡಿದವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದಾರೆ. ರಾಜ್ಯದಲ್ಲಿ 21 ದಿನ ಕಡಿಮೆ ಆಯ್ತು, 30 - 40ದಿನ ಮಾಡಿದ್ದರೆ ಕಾಂಗ್ರೆಸ್ ನೆಲ ಕಚ್ಚುತ್ತಿತ್ತು. ರಾಹುಲ್ ಗಾಂಧಿ ಹೋದ ಕಡೆ ಶೇ 99ರಷ್ಟು ನೆಲ ಕಚ್ಚಿದೆ. ಮೋದಿ ಹೋದ ಕಡೆ ಶೇ 99ರಷ್ಟು ಸಕ್ಸಸ್ ಕಂಡಿದೆ. ಇನ್ನಷ್ಟು ಕಡೆ ಕಾಂಗ್ರೆಸ್ ಪಾದಯಾತ್ರೆ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚಲಿ ಎಂದು ಕುಟುಕಿದರು.
ಇದನ್ನೂ ಓದಿ : ಬಿಬಿಎಂಪಿ ಚುನಾವಣೆ: ಮೀಸಲು ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್