ಬೆಂಗಳೂರು: ನಾವು ಉಪಚುನಾವಣೆ ಎದುರಿಸಲು ಸಿದ್ಧವಾಗಿದ್ದೇವೆ. ನ್ಯಾಯದ ಪರವಾಗಿ ಗೆಲುವು ಸಿಗಲಿದೆ ಎಂಬ ವಿಶ್ವಾಸವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಿನ ವಾತಾವರಣ ನೋಡಿದರೆ ಎಲ್ಲಾ 15 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ನಮ್ಮ ಪಕ್ಷದ ನಾಯಕರು ನಡೆಸಿದ ಸಮೀಕ್ಷೆ, ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಜನರ ನಿರ್ಧಾರ ಹಾಗೂ ಬಿಜೆಪಿಯಲ್ಲೇ ಒಂದಿಷ್ಟು ಅಪಸ್ವರ ನಮಗೆ ಗೆಲುವು ತಂದು ಕೊಡುತ್ತೆ ಎಂದರು.
ಹಲವು ಕ್ಷೇತ್ರದಲ್ಲಿ ಹೊಂದಾಣಿಕೆ ಇಲ್ಲ. ನಮ್ಮವರನ್ನು ಗೆಲ್ಲಿಸಬೇಕು, ಪಕ್ಷ ಬಿಟ್ಟವರಿಗೆ ತಕ್ಕ ಪಾಠ ಕಲಿಸಬೇಕೆಂದು ನಮ್ಮ ಕಾರ್ಯಕರ್ತರು ನಿರ್ಧಾರ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ನಮಗೆ ಗೆಲುವಿನ ಧನಾತ್ಮಕ ಅಂಶ ಇದೆ. ಇದರಿಂದ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.
ನಾವು ಸಕಲ ರೀತಿಯಲ್ಲಿ ಸಿದ್ಧವಾಗಿದ್ದೇವೆ. ಚುನಾವಣೆ ಬೇಗ ಬಂದಿದೆ. ಆದರೆ ನಾವು ಸಿದ್ಧತೆ ನಡೆಸಿಕೊಂಡಿದ್ದು, ಯಾವುದೇ ಒತ್ತಡ ಇಲ್ಲ. ಬದಲಾಗಿ ಚುನಾವಣೆ ಘೋಷಣೆಯನ್ನು ಸ್ವಾಗತಿಸುತ್ತೇವೆ. ಚುನಾವಣೆಗೆ ಸಜ್ಜಾಗಬೇಕಿರುವುದರಿಂದ ನಮ್ಮ ಯೋಜಿತ ಕಾರ್ಯಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದರು.
ಬೆಳಗಾವಿಯಲ್ಲಿ ಪಕ್ಷದ ಸಮಾವೇಶ ಇರಲಿದೆ. ಈ ನಿಟ್ಟಿನಲ್ಲಿ ಜನರಲ್ ಬಾಡಿ ಮೀಟಿಂಗ್ ಮುಂದೆ ಹಾಕುತ್ತೇವೆ. ಗಾಂಧಿ ಜಯಂತಿಯಂದು ಸಪ್ತಾಹ ನಡೆಸುತ್ತೇವೆ. ಇನ್ನೊಂದು ವಾರದಲ್ಲಿ ಎಲ್ಲಾ ಸಿದ್ಧತೆ ಕೈಗೊಳ್ಳಬೇಕಿದೆ. ಈಗಾಗಲೇ ಎರಡು ಸುತ್ತು ಎಲ್ಲಾ ಕ್ಷೇತ್ರಗಳ ನಾಯಕರ ಜತೆ ಚರ್ಚಿಸಿದ್ದೇವೆ. 2-3 ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಂಡಿದ್ದೇವೆ. ಒಮ್ಮತದ ಅಭ್ಯರ್ಥಿಗೆ ಬಿ ಫಾರಂ ನೀಡುತ್ತೇವೆ. ಗೆಲ್ಲಿಸಿಕೊಳ್ಳುವ ಶಕ್ತಿ, ಜನ ಬೆಂಬಲ ನಮಗಿದೆ. ನಾವು ಅತ್ಯಂತ ವಿಶ್ವಾಸದಿಂದ ಉಪಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದರು.
ಮುಕ್ತ, ಶಾಂತಿಯುತ, ಪಾರದರ್ಶಕವಾಗಿ ಉಪಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಸ್ಪೀಕರ್ ಆದೇಶದ ಪ್ರಕಾರ 15ನೇ ವಿಧಾನಸಭೆಯಲ್ಲಿ ಅನರ್ಹರು ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಇದನ್ನ ರಾಜ್ಯ ಚುನಾವಣಾ ಆಯೋಗ ಸ್ಪಷ್ಟೀಕರಣ ಕೊಟ್ಟಿದೆ. ನಾವು ಈಗಾಗಲೇ ಸುಪ್ರೀಂಕೋರ್ಟ್ ಕೆವಿಯಟ್ ಹಾಕಿದ್ದೇವೆ. ನಾವು ಸುಪ್ರೀಂಕೋರ್ಟ್ನಲ್ಲಿ ಪ್ರಬಲವಾಗಿ ವಾದ ಮಂಡನೆ ಮಾಡುತ್ತೇವೆ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ ಎಂದು ವಿವರಿಸಿದರು.
ನೆರವು ಬೇಡ ಅಂತಾರೆ..
ಕೇಂದ್ರದ ನೆರವು ಅಗತ್ಯ ಇಲ್ಲ ಅಂತ ಬಿಜೆಪಿ ಸಂಸದರು ಹೇಳ್ತಾರೆ. ಕೇಂದ್ರ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಹೀಗಾಗಿ ಬಿಜೆಪಿ ನಾಯಕರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೇಂದ್ರದಿಂದ ಯಾವುದೇ ನೆರವು ಇದುವರೆಗೂ ಬಂದಿಲ್ಲ. ನಾವು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುತ್ತೇವೆ. ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಪ್ರತಿಸ್ಪರ್ಧಿಗಳಿದ್ದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಬಿಜೆಪಿ ಪ್ರತಿಸ್ಪರ್ಧಿಗಳು ಇದ್ದಾರೆ. ಸ್ವತಂತ್ರವಾಗಿ ನಾವು ಸ್ಪರ್ಧೆ ಮಾಡುತ್ತೇವೆ. ಇನ್ನು ಎರಡ್ಮೂರು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ ಎಂದರು.
ನೀತಿ ಸಂಹಿತೆ ಉಲ್ಲಂಘನೆ..
ಬಿಜೆಪಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ. ಸರ್ಕಾರದ ಅಡ್ವೋಕೇಟ್ ಜನರಲ್ ಕರೆಯಿಸಿಕೊಂಡು ಅನರ್ಹ ಶಾಸಕರ ಜೊತೆ ಸಭೆ ಮಾಡಿದ್ದಾರೆ. ಇದು ಸ್ಪಷ್ಟವಾದ ನೀತಿ ಸಂಹಿತೆ ಉಲ್ಲಂಘನೆ. ವಿಧಾನಸೌಧದಲ್ಲಿ ವಿಡಿಯೋ ಕಾನ್ಪರೆನ್ಸ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವರ ಜೊತೆ ವಿಡಿಯೋ ಕಾನ್ಪರೆನ್ಸ್ ಮಾಡಬಹುದು. ಆದ್ರೆ ಬಿಜೆಪಿಯ ಜೆಪಿ ನಡ್ಡಾ ವಿಡಿಯೋ ಕಾನ್ಪರೆನ್ಸ್ನಲ್ಲಿದ್ರೆ ಅದು ನೀತಿ ಸಂಹಿತಿ ಉಲ್ಲಂಘನೆ. ಕೆಲವೊಂದು ಮಾಹಿತಿ ಪಡೆದು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ತಗೆದುಕೊಳ್ಳಬೇಕು ಎಂದರು.
ಪರಮೇಶ್ವರ್ ಪ್ರಸ್ತಾಪ..
ಹೊಸಕೋಟೆ ಸಮಾವೇಶಕ್ಕೂ ಪರಮೇಶ್ವರ್ ಗೈರು ವಿಚಾರ ಮಾತನಾಡಿ, ಪರಮೇಶ್ವರ್ಗೆ ಸಮಾವೇಶದ ಆಹ್ವಾನ ಕೊಡಲಾಗಿತ್ತು. ಆದ್ರೆ ಅವರ ಕಾಲೇಜಿನ ಕಾರ್ಯಕ್ರಮ ಇದ್ದ ಹಿನ್ನಲೆ ಬರಲು ಸಾಧ್ಯವಾಗಿಲ್ಲ. ಆ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೀನಿ. ಸಿಎಲ್ಪಿ ಸಭೆಗೆ ನಾನು ಕರೆ ಮಾಡಿದ್ದೆ. ಇದೆಲ್ಲಾ ಸಣ್ಣಪುಟ್ಟ ಸಮಸ್ಯೆ. ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇನೆ. ಪಕ್ಷದಲ್ಲಿ ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಲ್ಲ ಎಂದರು.