ಬೆಂಗಳೂರು : ತಂತ್ರಜ್ಞಾನವು ಮಾನವ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದ್ದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹ ಅದರಲ್ಲಿ ಆಸಕ್ತಿ ತೋರುತ್ತಿದೆ ಎಂದು ಕೇಂದ್ರ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ (T Rabi Sankar) ಬುಧವಾರ ಹೇಳಿದ್ದಾರೆ.
"ಹರ್ಬಿಂಗರ್-2023 - ಇನ್ನೋವೇಶನ್ ಫಾರ್ ಟ್ರಾನ್ಸ್‌ಫರ್ಮೇಷನ್" ನ ಎರಡನೇ ಜಾಗತಿಕ ಹ್ಯಾಕಥಾನ್ ಗ್ರಾಂಡ್ ಫಿನಾಲೆಯಲ್ಲಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಎಲ್ಲಾ ಕೇಂದ್ರೀಯ ಬ್ಯಾಂಕ್‌ಗಳು, ಸರ್ಕಾರಗಳು ಮತ್ತು ಇತರ ಅಧಿಕಾರಿಗಳು ಇದ್ದಕ್ಕಿದ್ದಂತೆ ಯಾಕೆ ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಹೆಚ್ಚಿನ ಒಳಗೊಳ್ಳುವಿಕೆಯನ್ನು ತೋರಿಸುತ್ತಿದ್ದಾರೆ?, RBI ಏಕೆ ಹ್ಯಾಕಥಾನ್‌ನಲ್ಲಿ ತೊಡಗಿಸಿಕೊಂಡಿದೆ. ಹೀಗೆ ಇದ್ದಕ್ಕಿದ್ದಂತೆ ತಂತ್ರಜ್ಞಾನದಲ್ಲಿ ಏಕೆ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ ಎಂಬುದರ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಐದು ವರ್ಷಗಳ ಹಿಂದೆ ಆರ್‌ಬಿಐ ಹ್ಯಾಕಥಾನ್‌ನಂತಹ ಟೆಕ್ ಆಧಾರಿತ ಈವೆಂಟ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ ಎನ್ನುವುದನ್ನು ಯಾರು ಊಹಿಸಿರಲು ಸಾಧ್ಯವಿರಲಿಲ್ಲ. ಪ್ರಾಥಮಿಕವಾಗಿ ವಿತ್ತೀಯ ನೀತಿಗಳು, ಕರೆನ್ಸಿ ಸಮಸ್ಯೆಗಳು, ಬ್ಯಾಂಕಿಂಗ್ ನಿಯಂತ್ರಣ ಮತ್ತು ಮೇಲ್ವಿಚಾರಣೆಯ ಮೇಲೆ ಕೇಂದ್ರೀಕರಿಸಿದ ತಂತ್ರಜ್ಞಾನವು RBI ಯ ಕಾರ್ಯಾಚರಣೆಗಳಿಂದ ದೂರವಿತ್ತು. ಐಟಿ ವಿಭಾಗವನ್ನು ಹೊಂದಿದ್ದರೂ ತಂತ್ರಜ್ಞಾನದ ಸಮಸ್ಯೆಗಳು ಆರ್‌ಬಿಐನ ರಾಡಾರ್‌ನಲ್ಲಿ ಎಂದಿಗೂ ಇರಲಿಲ್ಲ ಎಂದರು.
ಕಳೆದೆರಡು ದಶಕಗಳಲ್ಲಿ ಇದು ಹಲವಾರು ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸಿದೆ, ಉದಾಹರಣೆಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI), ಇದು ತಾಂತ್ರಿಕ ಸೇವೆಗಳನ್ನು ಒದಗಿಸುತ್ತದೆ. ಈ ಬದಲಾವಣೆಯು ಉದಯೋನ್ಮುಖ ತಂತ್ರಜ್ಞಾನಗಳು ಮಾನವ ಚಟುವಟಿಕೆಗಳ ಮೇಲೆ ಬೀರಲು ಪ್ರಾರಂಭಿಸಿದ ಗಮನಾರ್ಹ ಪ್ರಭಾವಕ್ಕೆ ಕಾರಣ ಎಂದು ಹೇಳಬಹುದು ಎಂದು ಅವರು ಹೇಳಿದ್ದಾರೆ.
ತಂತ್ರಜ್ಞಾನವು ಮಾನವ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಆದರೆ, ಅದು ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಹ ಸಹಾಯ ಮಾಡುತ್ತದೆ, ನಮಗೆಲ್ಲರಿಗೂ ಫಿನ್‌ಟೆಕ್‌ನ ಪರಿಚಯವಿದೆ, ಇದು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಹಣಕಾಸು ವ್ಯವಸ್ಥೆಯನ್ನು ಪರಿವರ್ತಿಸುತ್ತಿದೆ ಎಂದು ಉದಾಹಾರಣೆ ಸಮೇತ ವಿವರಿಸಿದರು.
ಕೃತಕ ಬುದ್ಧಿಮತ್ತೆ, ಸಂಶ್ಲೇಷಿತ ಜೀವಶಾಸ್ತ್ರ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ರೊಬೊಟಿಕ್ಸ್‌ನಂತಹ ಇತ್ತೀಚಿನ ತಂತ್ರಜ್ಞಾನಗಳು ಮಾನವ ಮತ್ತು ಸಾಮಾಜಿಕ ಜೀವನವನ್ನು ಕ್ರಾಂತಿಗೊಳಿಸುವುದಲ್ಲದೇ ಜಾಗತಿಕ ಕ್ರಮವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಅಂತಹ ತಂತ್ರಜ್ಞಾನಗಳು, ತಾಂತ್ರಿಕ ಉತ್ಪನ್ನಗಳು ಮತ್ತು ನಾವೀನ್ಯತೆಗಳ ಸೃಷ್ಟಿಕರ್ತರು ತಂತ್ರಜ್ಞಾನಗಳಲ್ಲಿ ಒಳಗೊಂಡಿರುವ ಅಪಾಯಕಾರಿ ಸಮಸ್ಯೆಗಳ ಬಗ್ಗೆ ಯೋಚಿಸಬೇಕು ಎಂದು ಅವರು ಮನವಿ ಮಾಡಿದರು.
ತಂತ್ರಜ್ಞಾನದಲ್ಲಿ ಆರ್‌ಬಿಐ ಆಸಕ್ತಿ ವಹಿಸುತ್ತಿರುವುದು ಜನರ ಆರ್ಥಿಕ ಯೋಗಕ್ಷೇಮ ಮತ್ತು ಹಣಕಾಸು ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ನಾವೀನ್ಯತೆಗೆ ಮಾರ್ಗದರ್ಶನ ನೀಡುವ ಗುರಿ ಹೊಂದಿದೆ. ಹ್ಯಾಕಥಾನ್‌ಗಳಂತಹ ಈವೆಂಟ್‌ಗಳಲ್ಲಿ ಆರ್‌ಬಿಐ ಭಾಗವಹಿಸುವ ಮೂಲಕ ತಾಂತ್ರಿಕ ತಜ್ಞರಿಗೆ ಪ್ರೋತ್ಸಾಹ ನೀಡುವುದಲ್ಲದೇ, ಹೊಸ ಹೊಸ ಆವಿಷ್ಕಾರಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಹಾಯ ಮಾಡಿದ ವಿವಿಧ ಟೆಕ್ ಗುಂಪುಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಇದನ್ನೂ ಓದಿ : 500 ರೂ ನೋಟುಗಳನ್ನ ವಾಪಸ್ ಪಡೆಯುವ ಮಾತೇ ಇಲ್ಲ..1000 ರೂ ನೋಟುಗಳ ಜಾರಿಯೂ ಇಲ್ಲ: ಆರ್‌ಬಿಐ