ಬೆಂಗಳೂರು: ದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟಾರ್ ರವಿಪೂಜಾರಿಯನ್ನು ಮಾ. 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಪೊಲೀಸ್ ಬಂದೋಬಸ್ತ್ನೊಂದಿಗೆ ಸಿಸಿಬಿ ಡಿಸಿಪಿ ಕುಲದೀಪ್ ನೇತೃತ್ವದ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿ ವಿರುದ್ಧ ಬೆಂಗಳೂರಿನಲ್ಲಿ 30ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಚಾರಣೆಗಾಗಿ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಅಭಿಯೋಜಕರು ವಾದ ಮಂಡಿಸಿದ್ದರು.
ರವಿಪೂಜಾರಿಯನ್ನು ನ್ಯಾಯಾಧೀಶರು ನಿನ್ನ ಹೆಸರೇನು?.. ಕನ್ನಡ ಬರುತ್ತಾ?.. ಪೊಲೀಸರು ಕಿರುಕುಳ ಕೊಟ್ರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆತ, ನನ್ನ ಹೆಸರು ರವಿಪೂಜಾರಿ. ನನಗೆ ಕನ್ನಡ ಬರುವುದಿಲ್ಲ. ಪೊಲೀಸರು ನನಗೆ ಕಿರುಕುಳ ನೀಡಿಲ್ಲ ಎಂದಿದ್ದಾನೆ.
ಆರೋಪಿಯ ವಿಚಾರಣೆ ವೇಳೆ ಆಡಿಯೋ ಹಾಗೂ ವಿಡಿಯೋ ಚಿತ್ರೀಕರಿಸಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ವಿಚಾರಣೆ ವೇಳೆ ಆರೋಪಿ ಸಹಕರಿಸಬೇಕು ಎಂದು ಹೇಳಿ ಮಾ. 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.