ಬೆಂಗಳೂರು: ಕೆಎಂಎಫ್ ಅಧ್ಯಕ್ಷರಾಗಲು ಕಾಂಗ್ರೆಸ್ ನಿರ್ದೇಶಕರನ್ನೇ ಹೈಜಾಕ್ ಮಾಡಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ನಿರ್ಧಾರ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೊಡ್ಡ ಬಿರುಕು ಮೂಡಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ನಿರ್ದೇಶಕರನ್ನು ರಾತ್ರೋರಾತ್ರಿ ಹೈದ್ರಾಬಾದ್‌ಗೆ ರವಾನೆ ಮಾಡಿದ ರೇವಣ್ಣ ನಿರ್ಧಾರಕ್ಕೆ ಈಗ ಕೈ ಪಾಳಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮಾತನ್ನೇ ಧಿಕ್ಕರಿಸಿ ಕಾಂಗ್ರೆಸ್ ನಿರ್ದೇಶಕರನ್ನೇ ರೆಸಾರ್ಟ್‌ಗೆ ರವಾನೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಉಡುಪಿ ಕಾಪು ದಿವಾಕರ ಶೆಟ್ಟಿ, ಧಾರವಾಡ ಹಿರೇಗೌಡ, ಬಿಜಾಪುರದ ಶ್ರೀಶೈಲ, ಶಿವಮೊಗ್ಗದ ವೀರಭದ್ರ ಬಾಬು ಹೈಜಾಕ್ ಆಗಿದ್ದಾರೆ. ಈವರೆಗೂ ಅವರು ಎಲ್ಲಿದ್ದಾರೆ. ನಾಳೆ ಚುನಾವಣೆ ವೇಳೆಗೆ ಬರುತ್ತಾರಾ? ಇಲ್ಲವಾ? ಎನ್ನುವುದು ತಿಳಿಯುತ್ತಿಲ್ಲ. ಸದ್ಯ ಎಲ್ಲಾ ನಾಲ್ಕೂ ನಿರ್ದೇಶಕರು ಹೈದ್ರಾಬಾದ್‌ನ ಬಂಜಾರಾ ಹಿಲ್ಸ್ ಬಳಿಯ ರೆಸಾರ್ಟ್‌ನಲ್ಲಿ ರೇವಣ್ಣ ಜತೆ ಇದ್ದಾರೆ ಎನ್ನಲಾಗ್ತಿದೆ.
ಕಾಂಗ್ರೆಸ್‌ನ ಭೀಮಾ ನಾಯಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿಸಲು ಹೆಚ್ ಡಿ ರೇವಣ್ಣ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ವಿರುದ್ಧ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿರುವ ಭೀಮಾ ನಾಯ್ಕ್‌ಗೆ ಅಧ್ಯಕ್ಷ ಪಟ್ಟ ಸಿಗದಂತೆ ಮಾಡಲು ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
12 ನಿರ್ದೇಶಕರು ಇರುವ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ನ 9 ಹಾಗೂ ಜೆಡಿಎಸ್ನ 3 ನಿರ್ದೇಶಕರು ಇದ್ದಾರೆ. ಇದರಿಂದಾಗಿ ಈ ಸಾರಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ದೋಸ್ತಿ ನಾಯಕರ ನಡುವೆ ಮಾತುಕತೆ ನಡೆದಿತ್ತು. ಇದಕ್ಕೆ ಹೆಚ್ಡಿಕೆ ಮತ್ತು ರೇವಣ್ಣ ಕೂಡ ಒಪ್ಪಿದ್ದರಂತೆ.