ಬೆಂಗಳೂರು: ಲಾಕ್‌ಡೌನ್ ವೇಳೆ ಬಡವರಿಗೆ, ದಿನಗೂಲಿ, ವಲಸೆ ಕಾರ್ಮಿಕರಿಗೆ ಸರ್ಕಾರ ಉಚಿತ ಅನ್ನಭಾಗ್ಯ ಕಲ್ಪಿಸಿತ್ತು. ಬಡವರ ಹೊಟ್ಟೆ ತುಂಬಿಸಲು ವಿತರಿಸಲಾದ ಉಚಿತ ಪಡಿತರಕ್ಕೂ ಖದೀಮರು ಕನ್ನ ಹಾಕಿದ್ದಾರೆ.
ಲಾಕ್‌ಡೌನ್ ವೇಳೆ ಬಡವರು, ಕೂಲಿ ಹಾಗೂ ವಲಸೆ ಕಾರ್ಮಿಕರು, ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿದ್ದರು. ಒಪ್ಪೊತ್ತಿನ ಊಟಕ್ಕೆ ಇಲ್ಲದ ಪರಿಸ್ಥಿತಿಯಲ್ಲಿ ಸರ್ಕಾರ ನೊಂದವರ ಹೊಟ್ಟೆ ತುಂಬಿಸಲುವ ಉಚಿತ ಪಡಿತರ ವಿತರಣೆಯನ್ನು ಮಾಡಿತ್ತು. ಏಪ್ರಿಲ್ನಿಂದ ಮೇ ತಿಂಗಳವರೆಗೆ ಪಡಿತರವನ್ನು ಪೂರೈಸಿತ್ತು. ಆದರೆ, ಖದೀಮರು ಈ ಬಡವರ ಪಾಲಿನ ಉಚಿತ ಪಡಿತರಕ್ಕೂ ಕನ್ನ ಹಾಕಲು ಯತ್ನಿಸಿದ್ದರು. ಆಹಾರ ಇಲಾಖೆ ಲಾಕ್‌ಡೌನ್ ವೇಳೆ ನಡೆಸಿದ ದಾಳಿಯ ವೇಳೆ ಕೋಟ್ಯಂತರ ರೂ.ಮೌಲ್ಯದ ಪಡಿತರ ಜಪ್ತಿ ಮಾಡಿದೆ.
ನ್ಯಾಯಬೆಲೆ ಅಂಗಡಿಯಲ್ಲಾಗಿರುವ ಅನ್ಯಾಯ ಎಷ್ಟು?: ಬಡವರಿಗೆ ಉಚಿತ ಪಡಿತರ ನೀಡಬೇಕಾದ ನ್ಯಾಯ ಬೆಲೆ ಅಂಗಡಿಗಳೇ ಬಡವರ ಅನ್ನಕ್ಕೆ ಕನ್ನ ಹಾಕುವ ಕೆಲಸ ಮಾಡಿವೆ. ನ್ಯಾಯ ಬೆಲೆ ಅಂಗಡಿಗಳು ಬಡವರ ಪಾಲಿನ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲೆತ್ನಿಸಿವೆ.
ಕಾನೂನು ಮಾಪನಶಾಸ್ತ್ರ ಇಲಾಖೆ ಏಪ್ರಿಲ್, ಮೇ ತಿಂಗಳಲ್ಲಿ ರಾಜ್ಯಾದ್ಯಂತ ಸುಮಾರು 10,000 ನ್ಯಾಯ ಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದೆ. ಇಲಾಖೆ ನೀಡಿದ ಅಂಕಿ ಅಂಶ ಪ್ರಕಾರ ಈ ವೇಳೆ ಅಕ್ರಮ ಎಸಗುತ್ತಿದ್ದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಒಟ್ಟು 1097 ಪ್ರಕರಣ ದಾಖಲಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂದ ಕಡಿಮೆ ಪಡಿತರ ಸರಬರಾಜು ಮಾಡಿದ 112 ಪಡಿತರ ಅಂಗಡಿಗಳ ಮೇಲೆ ಪ್ರಕರಣಗಳನ್ನ ದಾಖಲಿಸಲಾಗಿದೆ. ಉಳಿದಂತೆ ಒಟ್ಟು 985 ಇತರ ಪ್ರಕರಣ ದಾಖಲಿಸಲಾಗಿದೆ. ಕಡಿಮೆ ಪಡಿತರ ಪೂರೈಸಿರುವ ಜೊತೆಗೆ ಇತರ ಅಕ್ರಮ ಎಸಗಿದ ಪಡಿತರ ಅಂಗಡಿಗಳ ಮೇಲೆ ಸುಮಾರು 13.20 ಲಕ್ಷ ರೂ. ದಂಡ ವಿಧಿಸಲಾಗಿದೆ. ಸುಮಾರು 186 ಪಡಿತರ ಅಂಗಡಿಗಳ ಪರವಾನಿಗೆ ಅಮಾನತು ಮಾಡಲಾಗಿದೆ.
ಜಪ್ತಿ ಮಾಡಿದ ಪಡಿತರ ಎಷ್ಟು? : ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಹಾರ ಇಲಾಖೆ ಅಕ್ರಮ ಸಾಗಾಟ ಮಾಡುತ್ತಿದ್ದ ಸುಮಾರು 3.94 ಕೋಟಿ ರೂ. ಮೌಲ್ಯದ ಪಡಿತರ ಜಪ್ತಿ ಮಾಡಿದೆ. ಈ ಪೈಕಿ 8473.56 ಕ್ವಿಂಟಾಲ್ ಅಕ್ಕಿ, 107.63 ಕ್ವಿಂಟಾಲ್ ಬೇಳೆಕಾಳು, 24024 ಲೀಟರ್ ಅಡುಗೆ ಎಣ್ಣೆ ಜಪ್ತಿ ಮಾಡಿದೆ. ಸುಮಾರು 111.23 ಕ್ವಿಂಟಾಲ್ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಪಡಿತರ ಸಾಗಾಟ ಮಾಡುತ್ತಿದ್ದ 39 ವಾಹನಗಳನ್ನು ಇಲಾಖೆ ಜಪ್ತಿ ಮಾಡಿದೆ.
ಸುಮಾರು 70 ಮಂದಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದರೆ, 130 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಒಟ್ಟು 60 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕನ್ನ ಹಾಕಿದವರ ಮೇಲೆ ಕ್ರಮ : ಬಡವರ ಅನ್ನಕ್ಕೆ ಕನ್ನ ಹಾಕಿದವರ ಮೇಲೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ. ನಾವು ಇಲ್ಲಿವರೆಗೆ ಸುಮಾರು 10,500 ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದೇವೆ. ಅಕ್ರಮ ಎಸಗಿದವರ ಮೇಳೆ ಕ್ರಿಮಿನಲ್ ಕೇಸನ್ನು ದಾಖಲಿಸಿದ್ದೇವೆ. ಜೊತೆಗೆ ಅಕ್ರಮ ಎಸಗಿದವರಿಗೆ ನೋಟೀಸ್ ನೀಡಲಾಗಿದೆ. ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 4,000 ಕ್ವಿಂಟಾಲ್ ಅಕ್ಕಿಯನ್ನು ಈಗಾಗಲೇ ಜಪ್ತಿ ಮಾಡಿದ್ದೇವೆ ಎಂದು 'ಈಟಿವಿ ಭಾರತ'ಕ್ಕೆ ಅವರು ಮಾಹಿತಿ ನೀಡಿದ್ದಾರೆ.