ಬೆಂಗಳೂರು: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆಗೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ರಾಜ್ಯ ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
![ಆರ್.ವಿ. ದೇಶಪಾಂಡೆ ಅವರು ಸಿಎಂಗೆ ಬರೆದ ಪತ್ರ](https://etvbharatimages.akamaized.net/etvbharat/prod-images/kn-bng-04-deshapande-cmletter-script-7201951_25052020195852_2505f_1590416932_437.jpg)
ಈ ಬಗ್ಗೆ ಸಿಎಂಗೆ ಪತ್ರ ಬರೆದಿರುವ ಅವರು, ಕೂಡಲೇ ಸಂಬಂಧಿತ ಸರ್ಕಾರಿ ಆದೇಶಕ್ಕೆ ತಿದ್ದುಪಡಿ ತರಬೇಕು. ಕೃಷಿ ಸಾಲ ಬೇಸಾಯಗಾರರ ಚಟುವಟಿಕೆಗಳಿಗೆ ನೀಡಲಾಗುತ್ತದೆ ಹೊರತು ಅವರ ಮನೆ ಆಧಾರವಾಗಿ ಇಟ್ಟುಕೊಂಡು ವಿತರಿಸುವುದಿಲ್ಲ. ಹೊಸ ಆದೇಶದಲ್ಲಿ ಸಾಲ ನೀಡುವಾಗ ಸಹಕಾರ ಸಂಘಗಳು ಆಧಾರ್ ಕಾರ್ಡ್ ವಿಳಾಸ ಪರಿಗಣಿಸಿ ವಿತರಣೆ ನೀಡಬೇಕೆಂದು ಆದೇಶಿಸಲಾಗಿದೆ. ಇದು ರೈತರು ಹಾಗೂ ಸಹಕಾರ ಸಂಘಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೂಡಲೇ ಸರ್ಕಾರ ಇದಕ್ಕೆ ತಿದ್ದುಪಡಿ ತಂದು ಕೃಷಿ ಚಟುವಟಿಕೆ ನಡೆಸುವ ಪ್ರತಿಯೊಬ್ಬರಿಗೂ ಸಾಲ ನೀಡಲು ಸೂಚಿಸಬೇಕಾಗಿ ಮನವಿ ಮಾಡುತ್ತೇನೆ. ಅಲ್ಲದೆ ಕೃಷಿ ಭೂಮಿ ಇದ್ದ ಕ್ಷೇತ್ರದಲ್ಲಿ ವಾಸವಾಗಿರದೆ ಇರುವವರಿಂದ ಶೇ 7ರಷ್ಟು ಬಡ್ಡಿ ಸ್ವೀಕಾರ ಮಾಡುವಂತೆ ಹಾಗೂ ಆ ಕ್ಷೇತ್ರದಲ್ಲಿ ವಾಸವಾಗಿರದೇ ಇರುವವರಿಗೆ ಹೊಸ ಸಾಲ ನೀಡದಂತೆ ಆದೇಶ ನೀಡಲಾಗಿದೆ. ಇದನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.