ಬೆಂಗಳೂರು: ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ 105ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 45 ವರ್ಷ ದಾಟಿದ ಪುರುಷರು, 55 ವರ್ಷ ದಾಟಿದ ಮಹಿಳೆಯರು ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಹಿಂದೆ 65 ವರ್ಷದ ನಂತರದ ವಯೋಮಾನದವರಿಗೆ ಈ ಮಹಾಮಾರಿಯ ಆತಂಕ ಇತ್ತು ಎಂದು ಹೇಳಿದರು.
ಇನ್ನು ಹೃದಯಾಘಾತಕ್ಕೆ ಅತ್ಯಂತ ಪ್ರಮುಖ ಕಾರಣ ಕೌಟುಂಬಿಕ ಒತ್ತಡ. ಅದರಲ್ಲೂ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಹೃದಯಾಘಾತಕ್ಕೆ ತುತ್ತಾಗುವುದು ದಾಖಲೆಗಳಿಂದ ಸಾಬೀತಾಗಿದೆ. ಬರಬರುತ್ತಾ 35 ವರ್ಷದ ವ್ಯಕ್ತಿ ಕೂಡ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯೇ ಇದಕ್ಕೆ ಕಾರಣ ಎಂದು ತಿಳಿಸಿದರು.
ಹೃದ್ರೋಗ ಸಮಸ್ಯೆ ಹಾಗೂ ಮಧುಮೇಹ ಒಂದು ನಾಣ್ಯದ ಎರಡು ಮುಖವಿದ್ದಂತೆ. ಇವೆರಡರಲ್ಲಿ ಯಾವುದೇ ಸಮಸ್ಯೆ ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದು. ಮಾದಕ ವಸ್ತು ಸೇವನೆ, ಮದುಮೇಹ, ಬೊಜ್ಜು ಕೂಡ ಪ್ರಮುಖ ಕಾರಣಳಾಗಿವೆ. ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ ಶೇ. 35ರಷ್ಟು ಮಂದಿ 35 ವರ್ಷ ಒಳಗಿನವರು ಎಂಬುದು ಆತಂಕಕಾರಿ. ಶೇ. 5ರಷ್ಟು 25ರಿಂದ 30 ವರ್ಷದ ಒಳಗಿನ ಯುವಕರು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.
ಹೃದಯಾಘಾತ ಲಕ್ಷಣಗಳು:
ಕನಿಷ್ಠ 30 ನಿಮಿಷಗಳ ನಿರಂತರ ಎದೆನೋವು ಕಾಣಿಸಿದರೆ ಹೃದಯಾಘಾತ ಎಂದು ಭಾವಿಸಬಹುದು. ಎದೆಯ ಎಡ ಹಾಗೂ ಕೇಂದ್ರ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗೆ ಕೆಲವೊಮ್ಮೆ ಸೂಚನೆಗಳಿಂದ ಹೃದಯಾಘಾತ ಸಂಭಿಸುವುದು ಗೊತ್ತಾಗುತ್ತದೆ. ಆದರೆ ಇನ್ನು ಕೆಲವರರಿಗೆ ಯಾವುದೇ ಲಕ್ಷಣ ತೋರಿಸಿಕೊಳ್ಳದೆ ಬರಬಹುದು ಎಂದರು.