ಬೆಂಗಳೂರು: ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ನ.12ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 14.77 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಹೈಕೋರ್ಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ ವೀರಪ್ಪ ಮಾಹಿತಿ ನೀಡಿದರು.
ಜಿಲ್ಲಾ ನ್ಯಾಯಾಲಯಗಳ 1,013 ಪೀಠಗಳು ಹಾಗೂ ಹೈಕೋರ್ಟ್‌ನ 8 ಪೀಠಗಳು ಸೇರಿ ರಾಜ್ಯದಾದ್ಯಂತ ಒಟ್ಟು 1,021 ಪೀಠಗಳು ಅದಲಾತ್ ನಡೆಸಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,76,501 ಪ್ರಕರಣಗಳು ಹಾಗೂ 13,00,784 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 14,77,285 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಅಲ್ಲದೆ, ಸಾರ್ವಜನಿಕರಿಗೆ 1,282 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಹಿಂದಿನ ಲೋಕ ಅದಾಲತ್‌ಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಟ್ರಾಫಿಕ್ ಪ್ರಕರಣದಲ್ಲಿ 23 ಕೋಟಿ ರೂ ದಂಡ ಸಂಗ್ರಹ: ಪೊಲೀಸರ ಮನವಿಯಂತೆ, ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಗಳಿಗೂ ಅಧಿಕ ಬಾಕಿ ವಸೂಲಾತಿ ಪ್ರಕರಣಗಳಲ್ಲಿ ಲೋಕ ಅದಾಲತ್ ನೋಟಿಸ್ ನೀಡಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 4,18,775 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 23,89,38,021 ರೂ. ದಂಡ ಸಂಗ್ರಹಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಳಿದರು.
ಅಪಘಾತ ಪ್ರಕರಣಗಳಲ್ಲಿ 300 ಕೋಟಿ ರೂ.ಗೂ ಅಧಿಕ ಪರಿಹಾರ: ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 3,384 ಮೋಟಾರು ಅಪಘಾತ ಪ್ರಕರಣಗಳನ್ನು ಪರಿಹಾರದೊಂದಿಗೆ ಇತ್ಯರ್ಥ ಪಡಿಸಲಾಗಿದೆ. ಕೊಪ್ಪಳದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದಲ್ಲಿ (ಎಂಎಸಿಟಿ) ಬಾಕಿ ಇದ್ದ ಪ್ರಕರಣವೊಂದರಲ್ಲಿ 55 ಲಕ್ಷ ರೂ. ಪರಿಹಾರ ಪಾವತಿಸಿ ಇತ್ಯರ್ಥಪಡಿಸಲಾಗಿದ್ದರೆ, ಕೋಲಾರದ ಮುಳಬಾಗಿಲು ತಾಲೂಕಿನ ಎಂಎಸಿಟಿಯಲ್ಲಿನ ಪ್ರಕರಣವನ್ನು 14 ಲಕ್ಷ ರೂ. ಪರಿಹಾರದೊಂದಿಗೆ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಒಂದೇ ಚೆಕ್ ಬೌನ್ಸ್ ಕೇಸ್‌ನಲ್ಲಿ 32 ಕೋಟಿ ಪರಿಹಾರ: ಲೋಕ ಅದಾಲತ್‌ನಲ್ಲಿ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಕಾಯ್ದೆಯ (ಚೆಕ್ ಬೌನ್ಸ್) 10,994 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 328,94,26,020 ರೂ. ಪರಿಹಾರ ಕೊಡಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಂದು ಪ್ರಕರಣವನ್ನು 32 ಕೋಟಿ ರೂ ಪರಿಹಾರ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಮುರಿದ ಮನಸುಗಳು ಮತ್ತೆ ಒಂದಾದವು..: ಲೋಕ ಅದಾಲತ್‌ನಲ್ಲಿ 29 ಜೋಡಿಗಳಿಗೆ ಹೊಸ ಬದುಕು