ಬೆಂಗಳೂರು: ರೈತಾಪಿ ಜನರು ಇಂದಿನ ಹುಣ್ಣಿಮೆಯನ್ನ ಭೂಮಿ ಹುಣ್ಣಿಮೆಯೆಂದು, ಭೂಮಿ ತಾಯಿಯನ್ನು ವಿಶೇಷವಾಗಿ ಪೂಜಿಸಿ, ವಿಶೇಷ ಭಕ್ಷ ಭೋಜನಗಳನ್ನು ಅವಳಿಗೆ ನೈವೇದ್ಯವಾಗಿ ಅರ್ಪಿಸುವ ಮೂಲಕ ಆಚರಣೆ ಮಾಡುತ್ತಾರೆ. ನೈವೇದ್ಯ ಎಂದರೆ ಬರಿ ತೋರಿಸುವುದಲ್ಲ, ಮಾಡಿದ ಎಲ್ಲ ಭಕ್ಷ್ಯಗಳನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಹೊಲದಲ್ಲಿ ಅಲ್ಲಲ್ಲಿ ಚೆಲ್ಲುತ್ತಾರೆ. ಇದನ್ನು ಚೆರಗಾ ಚೆಲ್ಲುವುದು ಎನ್ನುತ್ತಾರೆ. ಅವರ ಪ್ರಕಾರ ಭೂತಾಯಿ ಉಂಡಂತೆ.
ಇನ್ನೊಂದು ಕಡೆಗೆ ವಿಜ್ಞಾನ ಬಲ್ಲವರು ಆಕಾಶ ಕಾಯಗಳೆಡೆಗೆ ನೋಡಿದರೆ, ಕುತೂಹಲಿಗಳಾದವರು ಇಂದು ಬ್ಲೂ ಮೂನ್ ಡೇ ಎಂದೂ ಕರೆಯುತ್ತಾರೆ. ಮತ್ತೆ ಕೆಲವು ಇಂದು ಕಾಣುವ ಹುಣ್ಣಿಮೆ ಚಂದ್ರನೆಡೆಗೆ ವಿಶೇಷ ಆಸಕ್ತಿ ತೋರುವುದು ಉಂಟು. ಹಾಗಾಗಿ ಅದರೊಂದಿಗೆ ಒಂದಿಷ್ಟು ಇಲ್ಲ - ಸಲ್ಲದ ಊಹಾಪೋಹಗಳು ಹುಟ್ಟಿಕೊಳ್ಳುವುದು ಸಹಜವಾಗಿ ಬಿಟ್ಟಿದೆ. ಜಲಕಂಟಕ ಇದೆ, ಜನ್ಮ ರಾಶಿಗಳ ಮೇಲು ಪ್ರಭಾವ ಬೀರುತ್ತವೆ ಎನ್ನುವ ಆತಂಕವನ್ನೂ ಸಹ ಹಬ್ಬಿಸಲಾಗುತ್ತದೆ.
ಆದರೆ, ಇಂದು ರಾತ್ರಿ 8.15ಕ್ಕೆ ಕಂಡ ಪೂರ್ಣಚಂದ್ರ ಈ ಅಕ್ಟೋಬರ್ ತಿಂಗಳಲ್ಲಿ ಕಾಣುವ ಎರಡನೇ ಪೂರ್ಣ ಚಂದ್ರವಾಗಿದ್ದು, ಇದರ ವಿಶೇಷತೆ ಏನು ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ ಎಂ.ವೈ. ಅವರನ್ನು ಕೇಳಿದಾಗ ಹೀಗೆ ಹೇಳುತ್ತಾರೆ.
ಇದರಲ್ಲಿ ಯಾವ ವಿಶೇಷತೆಯೂ ಇಲ್ಲ, ಇದು ಇತರ ಹುಣ್ಣಿಮೆಯ ಪೂರ್ಣ ಚಂದ್ರನಂತೆ ಇರುತ್ತದೆ ಮತ್ತು ಹಾಗೇ ಕಾಣುತ್ತದೆ. ಹಾಗೇನು ನೀಲಿ ಬಣ್ಣದ್ದಾಗಿರುವುದಿಲ್ಲ. ಯಾವ ಕೇಡು ತಂದೊಡ್ಡುವುದಿಲ್ಲ. ಆದರೆ, ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದಿರುವುದೇ ವಿಶೇಷತೆ ಎನ್ನುತ್ತಾರೆ.
ಇದಕ್ಕೆ ವೈಜ್ಞಾನಿಕವಾಗಿ ಯಾವುದೇ ವಿಶೇಷತೆ ಇಲ್ಲ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದರೆ ಎರಡನೇ ಹುಣ್ಣಿಮೆಗೆ ಬ್ಲೂ ಮೂನ್ ಎನ್ನುತ್ತಾರೆ. ಈ ಹೆಸರು ಸುಮ್ಮನೆ ಹೀಗೆ ಬಂದಿರುವುದು. ನೀಲಿ ಬಣ್ಣದಲ್ಲಿ ಎನ್ನುವ ಭ್ರಮೆ ಸುಳ್ಳು. ಈ ದಿನ ಚಂದ್ರ ಭೂಮಿಯಿಂದ ಬಹಳ ದೂರದಲ್ಲಿ ಅಂದರೆ ಅಪೋಭೂ ಬಿಂದುವಿನಲ್ಲಿ ಕಾಣುವುದರಿಂದ ಅದರ ಆಕಾರ ಸ್ವಲ್ಪ ಸಣ್ಣದಾಗಿ ಕಾಣುತ್ತದೆ ಮತ್ತು ಬೆಳಕು ಕೂಟ ಸ್ವಲ್ಪ ಕಡಿಮೆ ಇರುತ್ತದೆ ಎಂದರು.