ಬೆಂಗಳೂರು : ತೈಲದ ಮೇಲಿನ ಸೆಸ್ನಿಂದ 2020-21ರ ಆರ್ಥಿಕ ವರ್ಷದಲ್ಲಿ 20 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಜನರ ಮೇಲೆ ಇನ್ನಷ್ಟು ಹೊರೆ ಹೊರಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಎರಡು ದಿನದ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ಅವರು, ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾತನಾಡಿ, ಮೋದಿಯವರ ಲೂಟಿ ಕೊನೆಯಾಗಬೇಕು, ಯಡಿಯೂರಪ್ಪನವರ ಟ್ಯಾಕ್ಸ್ ಕೊನೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನರಿಂದ ಲೂಟಿ ಮಾಡ್ತಿವೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿದೆ. ಮೋದಿ ಹಾಗೂ ಯಡಿಯೂರಪ್ಪನವರ ತೆರಿಗೆ ಜನರಿಗೆ ಹೊರೆ ಆಗ್ತಿದೆ. ಮಧ್ಯಮ ವರ್ಗಕ್ಕೆ ಹೊರೆಯಾಗುವ ರೀತಿ ಕಳೆದ 9 ದಿನಗಳಿಂದ ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆಗುತ್ತಲೇ ಸಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ₹20 ಲಕ್ಷ ಕೋಟಿ ಲೂಟಿಯಾಗ್ತಿದೆ ಎಂದು ಆರೋಪಿಸಿದರು.
ಓದಿ : ಡಿಕೆಶಿ ಮಗಳ ಆರತಕ್ಷತೆಯಲ್ಲಿ ಭಾಗಿಯಾಗಲು ಸುರ್ಜೇವಾಲಾ ಬೆಂಗಳೂರಿಗೆ
ರಾಜಸ್ಥಾನ ಸರ್ಕಾರ ತೈಲದ ಮೇಲಿನ ಸೆಸ್ ಕಡಿಮೆ ಮಾಡಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಯಾಕೆ ಕಡಿಮೆ ಮಾಡ್ತಿಲ್ಲ?. ಅಡುಗೆ ಅನಿಲ ದರ 770 ರೂ. ಮೀರುತ್ತಿದೆ. ಕಳೆದ ಎರಡುವರೆ ತಿಂಗಳಲ್ಲಿ 175 ರೂ. ಹೆಚ್ಚಾಗಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಕರ್ನಾಟಕದ ಜನ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.