ಬೆಂಗಳೂರು: ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ ಜತೆ ಭಾನುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತುಕತೆ ನಡೆಸಿದರು. ಮುನಿಯಪ್ಪ ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುವಲ್ಲಿ ಸಫಲವಾಗಿದ್ದಾರೆ ಎನ್ನಲಾಗ್ತಿದೆ.
ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಜೊತೆ ಅವರ ಸಂಜಯನಗರ ನಿವಾಸದಲ್ಲಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲಾ, ಮುನಿಯಪ್ಪ ಅವರು ನನ್ನ ಹಿರಿಯ ಸಹೋದರ ಇದ್ದಂತೆ. ಅವರ ಮನೆ ನೋಡಬೇಕು ಅಂತ ಆಸೆಪಟ್ಟಿದ್ದೆ. ಆ ಪ್ರಕಾರ ಬಂದು ಮನೆ ನೋಡಿದ್ದೇನೆ. ಹಾಗೆ ಸಹಜವಾಗಿ ಮಾತುಕತೆ ನಡೆಸಿದ್ದೇವೆ ಎಂದರು.
ಮುನಿಯಪ್ಪಗೆ ಯಾವುದೇ ಟ್ರಬಲ್ ಇಲ್ಲ. ಅವರು ಟ್ರಬಲ್ಗೆ ಟ್ರಬಲ್ ಕೊಡುವಂತ ನಾಯಕ. ಎಐಸಿಸಿ ಸೂಚನೆ ಪ್ರಕಾರ ನಾನು ಇಲ್ಲಿ ಬಂದಿಲ್ಲ. ಅವರ ಕುಟುಂಬ ಸದಸ್ಯನಾಗಿ ಬಂದಿದ್ದೇನೆ ಅಷ್ಟೇ. ನನ್ನ ತಂದೆಯ ಕಾಲದಿಂದಲೂ ಅವರು ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ... ಸಿಎಂ ಭೇಟಿ ಮಾಡಿದ ವಿಚಾರ ತಿಳಿಸಿದ ಕೆ.ಎಚ್.ಮುನಿಯಪ್ಪ
ಕೆ ಎಚ್ ಮುನಿಯಪ್ಪ ಮಾತನಾಡಿ, ಕುಟುಂಬ ಸದಸ್ಯರಾಗಿ ಸುರ್ಜೆವಾಲಾ ಅವರು ಇಲ್ಲಿ ಬಂದಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ಅವರು ಇಲ್ಲಿಗೆ ಬಂದಿಲ್ಲ. ಪಕ್ಷ ಸಂಘಟನೆ ಕುರಿತಂತೆ ಕೆಲವೊಂದು ಚರ್ಚೆ ಮಾಡಿದ್ದೇವೆ. ಇದು ಹೊಸದೇನಲ್ಲ, ಅವರ ನನ್ನ ವಿಶ್ವಾಸ ಅವರ ತಂದೆಯ ಕಾಲದಿಂದಲೂ ಇದೆ. ನನ್ನ ಎಲ್ಲ ವಿಚಾರಗಳನ್ನು ಹೈಕಮಾಂಡ್ಗೆ ನಾನು ತಿಳಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ, ಇರ್ತೇನೆ. ಬೇರೆ ಯಾವುದೇ ಡಿಸ್ಕಷನ್ ಇಲ್ಲ. ಎಲ್ಲವೂ ಸಮಾಧಾನವಾಗಿ ನಡೆಯುತ್ತಿದೆ ಎಂದಿದ್ದಾರೆ.