ಬೆಂಗಳೂರು: ಕೆಸಿ ವ್ಯಾಲಿ ಯೋಜನೆ ವಿಳಂಬದ ಬಗ್ಗೆ ಮಾತನಾಡುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.
ವಿಧಾನಸಭೆಯಲ್ಲಿ ನಿಯಮ 69ರಡಿ ಮಾತನಾಡಿದ ಅವರು, ಕೆಸಿ ವ್ಯಾಲಿ ಯೋಜನೆಗೆ 1350 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ನನ್ನ ಕ್ಷೇತ್ರ ಶ್ರೀನಿವಾಸಪುರದ ಕೆರೆ ಕಟ್ಟೆಗಳನ್ನು ತುಂಬಿಸುತ್ತಿಲ್ಲ. ಕ್ಷೇತ್ರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭಿಕ ತಾಲೂಕುಗಳಲ್ಲಿ ರೈತರು ನೀರು ಎತ್ತುವಳಿ ಮಾಡ್ತಿದ್ದಾರೆ. ನಮ್ಮ ತಾಲೂಕಿಗೆ ನೀರು ಇನ್ನೂ ಬಂದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸತ್ತು ಹೋಗಿದೆ ಅಂತ ಮಾತಾಡುವುದು ತಪ್ಪು. ಆದರೂ ಹೀಗೆ ಮಾತಾಡುವ ಸ್ಥಿತಿ ಬಂದಿದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ಅಲ್ಲದೆ ಉಳಿದ ವಿಚಾರ ಮಾತಾಡಕ್ಕಾಗಲ್ಲ, ನನ್ನ ಬದಲು ಕೃಷ್ಣಬೈರೇಗೌಡ ಮಾತಾಡ್ತಾರೆ ಅಂತ ಹೇಳಿ ಕುಳಿತರು.
ಬಳಿಕ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, ಕೆ.ಸಿ. ವ್ಯಾಲಿಯಿಂದ ಇದುವರೆಗೂ ಜಲಘಟ್ಟ ಎಂಬ ಒಂದು ಕೆರೆಯೇ ತುಂಬಿಲ್ಲ. ಶ್ರೀನಿವಾಸಪುರದವರೆಗೂ ನೀರು ಹೋಗುತ್ತಲೇ ಇಲ್ಲ. ನೀರನ್ನು ರೈತರು ಮೇಲ್ಭಾಗದಲ್ಲಿ ಎತ್ತುವಳಿ ಮಾಡುತ್ತಿದ್ದಾರೆ. ಇದರಿಂದ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹೀಗಾದರೆ 1400 ಕೋಟಿ ರೂ. ಖರ್ಚು ಮಾಡಿದ್ದು ಕೆಲವೇ ರೈತರಿಗಾಗಿ ಅಂತಾಗುತ್ತದೆ. ನೀರು ಎತ್ತುವಳಿ ಮಾಡುತ್ತಿರುವವರು ನನ್ನ ನೆಂಟರೇ ಆಗಿದ್ದರೂ ಬಿಡಬೇಡಿ ಎಂದು ಆಗ್ರಹಿಸಿದರು.
ಕೆರೆ ತುಂಬಿಸಲು ಆದ್ಯತೆ ನೀಡುತ್ತೇವೆ: ಇದಕ್ಕೆ ಉತ್ತರಿಸಿ ಕಾನೂನು ಸಚಿವ ಮಾಧುಸ್ವಾಮಿ, ಕೆಸಿ ವ್ಯಾಲಿಯಿಂದ 440 ಎಂಎಲ್‌ಡಿ ಸಂಸ್ಕರಿತ ನೀರು ಸರಬರಾಜು ಮಾಡಬೇಕು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿಲ್ಲ ಎಂದು ಒಪ್ಪಿಕೊಂಡರು. ತ್ಯಾಜ್ಯ ಸಂಸ್ಕರಣೆಯಾಗಿ 300-310 ಎಂಎಲ್‌ಡಿ ಗರಿಷ್ಠ ನೀರು ಸಿಗುತ್ತಿದೆ. 280 ಎಂಎಲ್‌ಡಿ ನೀರು ಸರಾಸರಿ ಸಿಗ್ತಾ ಇದೆ. ಕೆಸಿ ವ್ಯಾಲಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಯಾವುದೇ ಕಾರಣಕ್ಕೂ ನಾಲೆಯಿಂದ ನೀರನ್ನು ತೆಗೆಯಲು ಬಿಡಲ್ಲ. 440 ಎಂಎಲ್‌ಡಿ ನೀರು ಕೊಟ್ಟೇ ಕೊಡುತ್ತೇವೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು. ರೈತರು ಪೈಪ್ ಲೈನ್ ಕೊಳವೆ ಹಾಕಿ ನೀರು ತೆಗಿತಾ ಇದ್ದಾರೆ. ಇದನ್ನು ನಿಲ್ಲಿಸಲು ತೀರ್ಮಾನ ಮಾಡುತ್ತೇವೆ. ಕೆ.ಸಿ. ವ್ಯಾಲಿ ಮೇಲೆ ನಿಗಾ ಇಡಲು ನಿವೃತ್ತ ಸೈನಿಕರನ್ನು ನೇಮಕ ಮಾಡುವ ಚಿಂತನೆ ಇದೆ. ಅದಕ್ಕಾಗಿ 4ಜಿ ವಿನಾಯಿತಿ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡುವುದು ಪುಣ್ಯದ ಕೆಲಸ. ಅದಕ್ಕಾಗಿ ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದರು.