ಬೆಂಗಳೂರು: ಕಾಂಗ್ರೆಸ್ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದು, ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನೆಲ್ಲಾ ಬಿಜೆಪಿಗೆ ಕರೆತರುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ನಾನು ಕಾಂಗ್ರೆಸ್ ಬಿಡುವಾಗ 36 ಜನ ನನ್ನ ಜೊತೆ ಇದ್ದರು. ಇದರಲ್ಲಿ 17 ಜನ ಬಂದೆವು. ಉಳಿದವರು ನಮ್ಮ ಜೊತೆ ಇದ್ದಾರೆ. ಈಗ 19 ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಅದರಲ್ಲಿ 3 ಜನ ಜೆಡಿಎಸ್ ನವರು. ಆದರೆ, ಜೆಡಿಎಸ್ ಶಾಸಕರನ್ನ ನಾನು ಮುಟ್ಟಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನನ್ನ ಬಾಂಧವ್ಯ ಚೆನ್ನಾಗಿದೆ. ಉಳಿದ 16 ಜನ ನನ್ನ ಸಂಪರ್ಕದಲ್ಲಿದ್ದಾರೆ. ಹೈಕಮಾಂಡ್ ಒಪ್ಪಿದರೆ ಉಳಿದ ಶಾಸಕರನ್ನು ಬಿಜೆಪಿ ಕರೆತರುತ್ತೇನೆ ಬರುತ್ತೇನೆ ಎನ್ನುವ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಮೂಡಿಸಿದ್ದಾರೆ.
ಸಿದ್ದುಗೆ ಗುದ್ದಿದ ಜಾರಕಿಹೊಳಿ:
ವಿಧಾನಸಭೆ ಒಳಗೆ ಏನು ಹೇಳಿದ್ದರು ಎಂದು ಒಮ್ಮೆ ಸಿದ್ದರಾಮಯ್ಯ ಜ್ಞಾಪಿಸಿಕೊಳ್ಳಲಿ. ಟೇಬಲ್ ಕುಟ್ಟಿ ಹೇಳಿದ್ದರು, ಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನ ಸೇರ್ಪಡೆ ಮಾಡಿಕೊಳ್ಳಲ್ಲ ಎಂದಿದ್ದರು. ಈಗ ಇವರಿಗೆ ಬಿಜೆಪಿ ಸೇರಿದ್ದವರ ಉಸಾಬರಿ ಯಾಕೆ ಬೇಕು. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವುದಕ್ಕೆ ಕರೆಯುತ್ತಿರಬಹುದು? ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ, ಮತ್ತೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರುತ್ತೆ ಎಂದು ಜಾರಕಿಹೊಳಿ ಭವಿಷ್ಯ ನುಡಿದ್ರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸಿಎಂ, ವರಿಷ್ಠರು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾನು ಬದ್ಧ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಹೈಕಮಾಂಡ್ ನನ್ನ ಜೊತೆ ಇದೆ. ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ. ನಮ್ಮ ಜಿಲ್ಲೆಯ ಇಬ್ಬರು ಶಾಸಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಮೂರನೇಯವರು ಸಹ ಬರೋರು ಇದ್ದಾರೆ. ಆದರೆ, ನಾನು ಅವರನ್ನು ಕರೆದುಕೊಳ್ಳುವುದಿಲ್ಲ. ಅವರು ಬಿಜೆಪಿಗೆ ಬಂದರೆ ನಾನು ಬೇರೆ ಕಡೆ ಹೋಗುತ್ತೇನೆ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟರು.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ