ಬೆಂಗಳೂರು: ಬೆಳಗಾವಿ ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತೆಯ ಪತ್ತೆ ಕಾರ್ಯವನ್ನು ಕಬ್ಬನ್ ಪಾರ್ಕ್ ಪೊಲೀಸರು ಚುರುಕುಗೊಳಿಸಿದ್ದಾರೆ.
ಸಂತ್ರಸ್ತೆ ಪರವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ. ದೂರು ನೀಡಿ ಎರಡು ದಿನ ಕಳೆದರೂ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ದೂರಿನಲ್ಲಿರುವ ಅಪೂರ್ಣ ಹಾಗೂ ಸಂತ್ರಸ್ತೆಯ ಬಗ್ಗೆ ಮಾಹಿತಿ ಇಲ್ಲದಿರುವುದು ತನಿಖೆಗೆ ಹಿನ್ನೆಡೆಯಾಗಿದೆ. ಈ ದಿಸೆಯಲ್ಲಿ ದಿನೇಶ್ ಕಲ್ಲಹಳ್ಳಿಗೆ ಸಂತ್ರಸ್ತೆ ಹಾಗೂ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಹಾಜರಾಗಲಿದ್ದಾರೆ.
ಮತ್ತೊಂದೆಡೆ ಸಂತ್ರಸ್ರೆ ಪತ್ತೆಗಾಗಿ ಪೊಲೀಸರು ನಿರಂತರ ಶೋಧ ಕಾರ್ಯ ನಡೆಸುತ್ತಿದ್ದು, ದೂರುದಾರ ದಿನೇಶ್ ಕಲ್ಲಹಳ್ಳಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯು ಆರ್ಟಿ.ನಗರ ದಲ್ಲಿ ವಾಸ ಮಾಡುತ್ತಿರುವ ಗುಮಾನಿ ಮೇರೆಗೆ ನಿನ್ನೆ 40 ಕ್ಕಿಂತ ಹೆಚ್ಚು ಮಹಿಳಾ ಪೊಲೀಸರು ಆರ್ಟಿ ನಗರ ಸುತ್ತ ಮುತ್ತ ಪಿಜಿ ಗಳಲ್ಲಿ ಹುಡುಕಾಟ ನಡೆಸಿದ್ದರು. ಇದುವರೆಗೂ ಸಂತ್ರಸ್ತ ಯುವತಿ ಮೊಬೈಲ್ ನಂಬರ್ ಸಹ ಪೊಲೀಸರಿಗೆ ಸಿಕ್ಕಿಲ್ಲ.
ಓದಿ: ಪ್ರೇಮಿ ಜೊತೆ ಲಿವ್ ಇನ್ ರಿಲೇಷನ್.. ಮಗಳನ್ನೇ ಅಪಹರಿಸಿ ಕೊಲೆ ಮಾಡಿದ ತಂದೆ!
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಮಾರುತಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ದಿನೇಶ್ ಕಲ್ಲಹಳ್ಳಿಯಿಂದ ಸಂತ್ರಸ್ತೆ ಸಂಪರ್ಕದ ಬಗ್ಗೆ ಮಾಹಿತಿ ನೀಡಿದ ಬಳಿಕ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳಲು ಮುಂದಾಗಿದ್ದಾರೆ.