ಬೆಂಗಳೂರು : ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಕೋವಿಡ್ ವೇಷ ಧರಿಸಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿರುವ ಯುವತಿ ಪರ ವಕೀಲ, ಪ್ರತ್ಯೇಕ ವೈದ್ಯರ ತಂಡದಿಂದ ತಪಾಸಣೆ ನಡೆಸಿ ವರದಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಪತ್ರ ಬರೆದಿದ್ದಾರೆ.
ರಮೇಶ್ ಜಾರಕಿಹೊಳಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ರೀತಿ ನಾಟಕವಾಡುತ್ತಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವೆಂಟಿಲೇಟರ್ ಮಾಸ್ಕ್ ಬದಲು ಬಟ್ಟೆ ಮಾಸ್ಕ್ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ. ರಮೇಶ್ ಜಾರಕಿಹೊಳಿಗೆ ನಿಜವಾಗಿಯೂ ಕೋವಿಡ್ ಪಾಸಿಟಿವ್ ಇದೆಯಾ ಎಂದು ತಪಾಸಣೆ ನಡೆಸಿ ವರದಿ ನೀಡಬೇಕು ಎಂದು ಯುವತಿ ಪರ ವಕೀಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಓದಿ : ಎಸ್ಐಟಿ ಸ್ವತಂತ್ರ ತನಿಖಾ ಸಂಸ್ಥೆ, ಅದರ ಬಗ್ಗೆ ಟೀಕೆ-ಟಿಪ್ಪಣಿ ಸರಿಯಲ್ಲ : ಪ್ರವೀಣ್ ಸೂದ್
ಅತ್ಯಾಚಾರ ಪ್ರಕರಣ ಆರೋಪಿ ರಮೇಶ್ ಜಾರಕಿಹೊಳಿ ಏ.5 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅವರು ಅನಾರೋಗ್ಯದ ಕಾರಣ ಒಡ್ಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತಿದ್ದಾರೆ. ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಎಸ್ಐಟಿ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಅವರು ಸಚಿವ ಡಾ.ಸುಧಾಕರ್ ಅವರಿಗೆ ಆತ್ಮೀಯರು. ಹೀಗಾಗಿ ಸರ್ಕಾರಿ ಅಸ್ಪತ್ರೆ ವೈದ್ಯರ ಮೇಲೆ ಪ್ರಭಾವ ಬೀರಿದ್ದಾರೆ. ಈ ಮೂಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.