ಬೆಂಗಳೂರು : ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ತಮ್ಮ ಬೆಂಬಲಿಗರೊಂದಿಗೆ ನಾಳೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಾಗೂ ಪಕ್ಷಕ್ಕೆ ತಿಂಗಳುಗಳ ಹಿಂದೆ ರಾಜೀನಾಮೆ ಸಲ್ಲಿಸಿದ್ದ ಅವರು ತಮ್ಮ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಆತುರ ತೋರಿಸಿರಲಿಲ್ಲ. ಸಾಕಷ್ಟು ಪಕ್ಷಗಳಿಗೆ ಸೇರುವ ಆಯ್ಕೆ ಅವರ ಮುಂದಿತ್ತು. ಆದರೆ ತಮ್ಮ ರಾಜಕೀಯ ತತ್ವ-ಸಿದ್ಧಾಂತಗಳಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಎಂದು ಅವರು ಇದೀಗ ಆಯ್ಕೆ ಮಾಡಿಕೊಂಡಿದ್ದಾರೆ.
ನಾಳೆ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಮೇಶ್ ಬಾಬು ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಪಕ್ಷದ ನಾಯಕರು ಉಪಸ್ಥಿತರಿರಲಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಮಾತನಾಡಿರುವ ರಮೇಶ್ ಬಾಬು, ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ನಾನು, ನಿಮ್ಮೆಲ್ಲರ ಹಾರೈಕೆ, ಸಲಹೆ, ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಉತ್ತಮ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತನಾಗಿದ್ದೇನೆ. ಸೀಮಿತ ಅವಧಿಗೆ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಪ್ರತಿನಿಧಿಯಾಗಿ ಸಂವಿಧಾನದ ಆಶಯಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ಪರಿಷತ್ ಸದಸ್ಯನಾಗಿ, ಪಕ್ಷದ ಪದಾಧಿಕಾರಿಯಾಗಿ ನನ್ನ ಜನಪರ ಕೆಲಸಗಳಿಗೆ ಮಾಧ್ಯಮದಲ್ಲಿ ಪ್ರಚಾರ ಕೊಡುವ ಮೂಲಕ ನನ್ನ ಬೆನ್ನು ತಟ್ಟುವ ಕೆಲಸ ಮಾಡಿದ್ದೀರಿ.
ನನ್ನ ಈ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತು ಚಿಂತನೆಗಳಿಗೆ ಪೂರಕವಾಗಿ ಸಮಾಜಮುಖಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ನಾಳಿನ ಕಾರ್ಯಕ್ರಮ ನನ್ನ ರಾಜಕೀಯ ತಿರುವಿನ ಒಂದು ಘಟ್ಟವಾಗಲಿದೆ ಎಂದು ಕೂಡ ರಮೇಶ್ ಬಾಬು ತಿಳಿಸಿದ್ದಾರೆ.