ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಗೆ ನಗರದ ಜನರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದರು. ಪಾದಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಎರಡು ದಿನದ ಪಾದಯಾತ್ರೆ ನಡೆಯಲಿದೆ. ಇವತ್ತು 18 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದೇವೆ.
ಬಿಟಿಎಂ ಲೇಔಟ್ನಿಂದ ಅರಮನೆ ಮೈದಾನವರೆಗೂ ಪಾದಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿ ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬ ಇಂಜಿನ್ ಸರ್ಕಾರ. ಬಿಜೆಪಿಯವರು ಉತ್ತರಕುಮಾರನ ರೀತಿ ನಡೆದುಕೊಳ್ಳುತ್ತಿದ್ದಾರೆ. ಉತ್ತರಕುಮಾರನ ಪೌರುಷ ಒಲೆ ಮುಂದೆ ಅನ್ನೋ ಹಾಗೆ ಎಂದರು.
ಕೇಂದ್ರದ ಮುಂದೆ ಎಲ್ಲ ಸಂಸದರು ಹೋಗಿ ಒತ್ತಡ ಹಾಕಬೇಕಿತ್ತು. ಅದನ್ನ ಬಿಟ್ಟು ಪೇಪರ್ ಟೈಗರ್ ಆಗಿದ್ದಾರೆ. ಬಿಜೆಪಿಯವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿ, ಆರ್.ಆರ್.ನಗರ ಕ್ಷೇತ್ರದಲ್ಲಿ ಸಾವಿರಾರು ಫ್ಲೆಕ್ಸ್ ಹಾಕಿದ್ದಾರೆ. ಅಶ್ವತ್ಥ ನಾರಾಯಣ ಹುಟ್ಟಹಬ್ಬ, ಸೋಮಣ್ಣ ಹುಟ್ಟುಹಬ್ಬ, ಗೋಪಾಲಯ್ಯ ಕ್ಷೇತ್ರದಲ್ಲಿ ಸಹ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ ಹಾಕೋದು ಕಾನೂನು ರೀತಿ ತಪ್ಪು. ಕಾನೂನು ಎಲ್ಲರಿಗೂ ಒಂದೇ ಅಲ್ವಾ? ಎಂದರು.
ಬೆಂಗಳೂರಿನ ಜನರಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಸ್ಪಲ್ಪ ಟ್ರಾಫಿಕ್ ಸಮಸ್ಯೆ ಆಗಲಿದೆ. ಇದನ್ನ ದಯವಿಟ್ಟು ಸಹಿಸಿಕೊಳ್ಳಬೇಕು. ಬೆಂಗಳೂರಿಗೆ ನೀರಿನ ಅವಶ್ಯಕತೆ ಇದೆ. ನಮ್ಮ ಈ ಹೋರಾಟದಿಂದ ನಗರಕ್ಕೆ ನೀರು ಸಿಗುತ್ತದೆ ಎಂದರು.
ಇವತ್ತು ಬೊಮ್ಮಾಯಿ ಅವರು ಕುಡಿಯುತ್ತಿರುವುದು ನಾವು ತಂದಿದ್ದ ನೀರು. ಬೆಂಗಳೂರಿಗೆ ಐದು ಹಂತದ ನೀರು ಕೊಟ್ಟಿದ್ದು ನಾವೇ. ಸಿಎಂ ಈಗ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಅಷ್ಟೇ. ಉಕ್ರೇನ್ನಲ್ಲಿ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ. ಪ್ರಧಾನ ಮಂತ್ರಿಯವರು ಚುನಾವಣಾ ಪ್ರಚಾರ ಬಿಟ್ಟು ಈಗಲಾದರೂ ಎಚ್ಚೆತ್ತು ಕೊಳ್ಳಲಿ. ಕೇಂದ್ರ ಸರ್ಕಾರಕ್ಕೆ ನಮ್ಮ ವಿದ್ಯಾರ್ಥಿಗಳ ಸಮಸ್ಯೆ ಗೊತ್ತಾಗುತ್ತಿಲ್ಲ. ಇದುವರೆಗೂ 500 ವಿದ್ಯಾರ್ಥಿಗಳನ್ನ ಮಾತ್ರ ಕರೆ ತಂದಿದ್ದಾರೆ.
ಇದನ್ನು ಓದಿ:ಜಿ.ಪಂ. ಚುನಾವಣೆ: 851 ರಲ್ಲಿ 766 ಕ್ಷೇತ್ರ ಗೆದ್ದು ಬೀಗಿದ ಪಟ್ನಾಯಕ್ ಪಡೆ.. ಬಿಜೆಪಿಗೆ ದೊಡ್ಡ ಮುಖಭಂಗ
ಎಲ್ಲ ವಿದ್ಯಾರ್ಥಿಗಳನ್ನ ಏರ್ ಲಿಫ್ಟ್ ಮಾಡುತ್ತೇವೆ ಎಂದು ಹೇಳಿ ಸುಮ್ನೆ ಆಗಿದ್ದಾರೆ. ನವೀನ್ ಸಾವಿಗೆ ಕಾರಣ ಯಾರು?, 4000 ಸಾವಿರ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ. ಆದರೂ ವಿದ್ಯಾರ್ಥಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಕರ್ನಾಟಕ ವಿದ್ಯಾರ್ಥಿಗಳನ್ನ ಕರೆತರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇಲ್ಲದಂತೆ ಕಾಣಿಸುತ್ತಿದೆ. ಕೇಂದ್ರ ಸರ್ಕಾರ ಕಣ್ಮಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಉಕ್ರೇನ್ನಲ್ಲಿ ನವೀನ್ ಸಾವನ್ನಪ್ಪಿರುವ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ನಮ್ಮ ಕ್ಷೇತ್ರದ ನವೀನ್ ಸಾವನ್ನಪ್ಪಿದಾರೆ. ಇದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ. ನವೀನ್ ಸಾವಿಗೆ ಸರ್ಕಾರದ ಧೋರಣೆಯೇ ಕಾರಣ. ನಾನು ನಿನ್ನೆ ಅವರ ತಂದೆ ಜೊತೆ ಮಾತನಾಡಿದ್ದೇನೆ. ಕೂಡಲೇ ಮೃತದೇಹವನ್ನು ದೇಶಕ್ಕೆ ಕರೆ ತರುವ ಕೆಲಸ ಮಾಡಬೇಕು. ಅವರಿಗೆ ಪರಿಹಾರ ನೀಡಬೇಕು ಎಂದರು.