ಬೆಂಗಳೂರು : “777 ಚಾರ್ಲಿ” ಸಿನಿಮಾಗೆ ಬೊಮ್ಮಾಯಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಸಿನಿಮಾ ಮೇಲಿನ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಮೊತ್ತವನ್ನು ಪ್ರದರ್ಶಕರಿಗೆ ಹಿಂಪಾವತಿ ಮಾಡುವ ಮೂಲಕ ಚಲನಚಿತ್ರ ವೀಕ್ಷಕರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: 777 ಚಾರ್ಲಿ ಸಿನಿಮಾ ನೋಡಿ ನಾನು ಶ್ವಾನ ಪ್ರಿಯ ಎಂದ ಸಿಎಂ ಬಸವರಾಜ್ ಬೊಮ್ಮಾಯಿ!
ಆ ಮೂಲಕ ಶ್ವಾನಪ್ರಿಯ ಸಿಎಂ ಬೊಮ್ಮಾಯಿ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಆ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಕರ್ನಾಟಕ ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಾರ್ಲಿ ಸಿನಿಮಾಕ್ಕೆ ಜೂನ್ 19ರಿಂದ ಆರು ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಹಿಂಪಾವತಿ ಸೌಲಭ್ಯ ನೀಡಲು ನಿರ್ಧರಿಸಿದೆ.

ನಟ ರಕ್ಷಿತ್ ಶೆಟ್ಟಿ ಜೂನ್ 14ರಂದು ಸಿಎಂಗೆ ಪತ್ರ ಬರೆದು, “777 ಚಾರ್ಲಿ”ಗೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಮನವಿ ಪತ್ರದಲ್ಲಿ ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಣಿ ಹಿಂಸೆಯ ಸೂಕ್ಷ್ಮತೆಗಳನ್ನು ಎತ್ತಿಹಿಡಿಯುವ ಆಶಯ ಈ ಚಿತ್ರದ ಕಥಾಹಂದರದಲ್ಲಿ ಒಳಗೊಂಡಿದ್ದು, ಇದರ ಜೊತೆಗೆ ಈ ಚಿತ್ರವು ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವನ್ನು ಸಾರುತ್ತದೆ ಎಂದು ವಿವರಿಸಿದ್ದರು.

ಈ ಮನವಿಯನ್ನು ಪರಿಗಣಿಸಿ, ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರೆ, ದೇಶದ ಇನ್ನಷ್ಟು ಜನರಿಗೆ ಈ ಸಂದೇಶವನ್ನು ಮುಟ್ಟಿಸುವಲ್ಲಿ ಸಹಕಾರಿಯಾಗುತ್ತದೆ. ಹಾಗಾಗಿ, ಸೂಕ್ತ ಆದೇಶ ಹೊರಡಿಸುವಂತೆ ಕೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರದರ್ಶಕರು ಸಿನಿಮಾ ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸತಕ್ಕದ್ದಲ್ಲ ಮತ್ತು ಸಂಗ್ರಹಿಸತಕ್ಕದ್ದಲ್ಲ ಹಾಗೂ ಎಸ್‌ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಾಟ ಮಾಡಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲಿ ಕೋಟ್ಯಂತರ ಗಳಿಕೆ; ರಕ್ಷಿತ್ ಸಾಲ ತೀರಿಸಿದ '777 ಚಾರ್ಲಿ'!