ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
65ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ, ಸಚಿವ ಲಕ್ಷ್ಮಣ ಸವದಿ, ಶಾಸಕ ಉದಯ್ ಗರಡುಚಾರ್ ಭಾಗಿಯಾಗಿದ್ದರು.
ಪ್ರಶಸ್ತಿ ಪ್ರದಾನಕ್ಕೂ ಮುಂಚೆ ಮಾತಾನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಭಾಷೆ - ಸಂಸ್ಕೃತಿಯು ಹೆತ್ತ ತಾಯಿಗೆ ಸಮಾನ. ಹೀಗಾಗಿ ಎಂದಿಗೂ ಗೌರವ ಸಲ್ಲಿಸಬೇಕು. ಕನ್ನಡ ಭಾಷೆಯನ್ನು ಬೇರೆಲ್ಲೋ ಉಳಿಸಲು ಸಾಧ್ಯವಾಗುದಿಲ್ಲ. ಈ ಜಾಗದಲ್ಲೇ ಉಳಿಸಬೇಕಿರುವುದರಿಂದ ಉಳಿಸುವ ಕೆಲಸ ಮಾಡಬೇಕು ಎಂದರು.
ಕನ್ನಡದ ಕೆಲಸಕ್ಕಾಗಿ, ಏಳಿಗೆಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತೆ. ಕನ್ನಡ ಭಾಷೆಗಾಗಿ ಕನ್ನಡ ಕಾಯಕದ ವರ್ಷ ಆಚರಿಸಲಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಸಿ.ಟಿ.ರವಿ ಮಾತನಾಡಿ, ಕನ್ನಡ ಭಾಷೆ ಬೆಳೆಯಬೇಕು, ಉಳಿಯಬೇಕು. ಕನ್ನಡ ಭಾಷೆ ಸುದೀರ್ಘ ಇತಿಹಾಸ ಹೊಂದಿದ್ದು, ಭಾಷೆ ಕಳೆದುಕೊಂಡರೆ ಸಂಸ್ಕೃತಿ ಕಳೆದುಕೊಂಡಂತೆ. ಹೀಗಾಗಿ ಸಾಂಸ್ಕೃತಿಕ ಶ್ರೀಮಂತಿಯನ್ನು ಹಣದಿಂದ ತೂಕ ಮಾಡಲು ಸಾಧ್ಯವಾಗುವುದಿಲ್ಲ. ಭವ್ಯ ಪರಂಪರೆಯ ನಾಡಿನಲ್ಲಿ ಹುಟ್ಟುವುದೇ ಅದೃಷ್ಟ ಎಂದರು.
ಸಾಧಕರ ಪಟ್ಟಿ ಆಯ್ಕೆ ಮಾಡುವಾಗ ಸಾಕಷ್ಟು ಕಷ್ಟವಾಗಿತ್ತು. ಆದರೆ 65 ವಿಶೇಷ ಸಾಧಕರನ್ನ ಆಯ್ಕೆ ಮಾಡಿ ಗುರುತಿಸಿದ್ದೇವೆ ಎಂದು ಹೇಳಿದರು.
ಮತ್ತೇರಿಸುವ ಖಾತೆ ಇದು: ಸಿ.ಟಿ.ರವಿ
ಖಾತೆ ಹಂಚಿಕೆ ಸಮಯದಲ್ಲಿ ಮುಖ್ಯಮಂತ್ರಿಗಳು ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಟ್ಟರು. ಆಗಸ್ಟ್ 24ರಂದು ಖಾತೆ ಬದಲಾವಣೆ ಆದಾಗ ಬಹಳಷ್ಟು ಜನರು ಬೇರೆ ಖಾತೆ ನೀಡಬೇಕಿತ್ತು ಎಂದುಕೊಂಡರು. ಆಗ ಆರಂಭದಲ್ಲಿ ಸ್ವಲ್ಪ ದುಗಡ ಅನ್ನಿಸಿತ್ತು. ನಾನು ಸಹ ಪೆಚ್ಚಾಗಿದ್ದೆ. ಆದರೆ ಸಂಸ್ಕೃತಿ ಒಳಹೊಕ್ಕಗಾಲೇ ಹೋಗ್ತಾ ಹೋಗ್ತಾ ಈ ಇಲಾಖೆ ಸಾಕಷ್ಟು ಮತ್ತೇರಿಸಿತು ಎಂದರು.
ಈ ಇಲಾಖೆ ನನಗೆ ತೃಪ್ತಿ ತಂದುಕೊಟ್ಟಿದೆ. ಆದರೆ ಪಕ್ಷ ವಹಿಸಿದ ಬೇರೆ ಜವಾಬ್ದಾರಿಯಿಂದ ನಾನು ರಾಜೀನಾಮೆ ಕೊಡಬೇಕಾಯ್ತು. ಆದರೆ ಸಿಎಂ ಇನ್ನೂ ರಾಜೀನಾಮೆ ಅಂಗಿಕರಿಸಿಲ್ಲ. ಆದರೆ ಮುಖ್ಯಮಂತ್ರಿಗಳು ನನ್ನನ್ನು ಮಂತ್ರಿ ಪದವಿಯಿಂದ ಬಿಡುಗಡೆ ಮಾಡಿಯೇ ಮಾಡ್ತಾರೆ. ಮುಂದೆ ಈ ಇಲಾಖೆಗೆ ಬರುವ ಮಂತ್ರಿ ಚೆನ್ನಾಗಿ ಮುಂದುವರಿಸಿಕೊಂಡು ಹೋಗಲಿ ಎಂದರು.
ಕಲಾತಂಡ ಆ್ಯಪ್ ಬಿಡುಗಡೆ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಗೊಳಿಸಿರುವ ಕಲಾತಂಡ ಆ್ಯಪ್ ಇದೇ ಸಂದರ್ಭದಲ್ಲಿ ಬಿಡುಗಡೆಯಾಯಿತು. ಕಲಾ ತಂಡಗಳು ನಡೆಸುವ ಕಾರ್ಯಕ್ರಮಗಳ ಸ್ಥಳದ ವಿವರ ಇದರಲ್ಲಿ ಸಿಗಲಿದೆ. ಆ್ಯಪ್ ಮೂಲಕ ಎಲ್ಲೆಲ್ಲಿ ರಂಗಭೂಮಿ ಕಲಾತಂಡಗಳು ಕಾರ್ಯಕ್ರಮ ಆಯೋಜಿಸಿವೆ ಎಂಬುದನ್ನು ಕೂಡ ತಿಳಿಯಬಹುದು.