ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಸಂಚಲನ ಮೂಡಿಸಿದ್ದು, ಜೆಡಿಎಸ್ ತನ್ನ ಶಾಸಕರಿಗೆ ಈಗಾಗಲೇ ವಿಪ್ ಜಾರಿ ಮಾಡಿದೆ. ಈ ವಿಚಾರವಾಗಿ ನಾಳೆ ಸಂಜೆ 6ಕ್ಕೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಹತ್ವದ ಶಾಸಕಾಂಗ ಸಭೆ ನಡೆಯಲಿದ್ದು, ತಪ್ಪದೆ ಹಾಜರಾಗುವಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ.
'ಕಾಂಗ್ರೆಸ್ನೊಂದಿಗೆ ಮಾತುಕತೆಗೆ ಸಿದ್ಧ': ಹೆಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಚುನಾವಣಾ ಮೈತ್ರಿ ಮುರಿದು ಬಿದ್ದಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ 2ನೇ ಪ್ರಾಶಸ್ತ್ಯದ ಮತ ನೀಡುವುದಾಗಿ ಹೆಚ್‌ಡಿಕೆ ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್ನೊಂದಿಗೆ ಮಾತುಕತೆಗೂ ಸಿದ್ಧ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣಾ ಕಣದಿಂದ ನಮ್ಮ ಅಭ್ಯರ್ಥಿ ಹಿಂದಕ್ಕೆ ಸರಿಯುವ ಮಾತೇ ಇಲ್ಲ : ಹೆಚ್‌ಡಿಕೆ
ಹೀಗಾಗಿ ಎರಡು ಪಕ್ಷಗಳ ನಡುವೆ ಮರುಮೈತ್ರಿ ಆಗುವುದೇ ಎಂಬುದನ್ನು ಕಾದುನೋಡಬೇಕು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಡಿ.ಕುಪೇಂದ್ರ ರೆಡ್ಡಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ನೀಡುವಂತೆ ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಶಾಸಕರಿಗೆ ವಿಪ್ ನೀಡಿದ್ದಾರೆ.
ಪಕ್ಷಗಳ ನಡುವೆ ಪೈಪೋಟಿ: ಚುನಾವಣಾ ಕಣದಲ್ಲಿ ಆರು ಅಭ್ಯರ್ಥಿಗಳಿದ್ದು ಮೂರು ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ನಲ್ಲಿ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವ ಪ್ರಯತ್ನವೂ ಮುಂದುವರೆದಿದೆ. ಪಕ್ಷದ ಎಲ್ಲ 32 ಶಾಸಕರ ಮತಗಳು ಅಧಿಕೃತ ಅಭ್ಯರ್ಥಿಗೆ ದೊರೆಯುವಂತೆ ಮಾಡಲು ನಿರಂತರ ಪ್ರಯತ್ನ ನಡೆಯುತ್ತಿದೆ. ಸಾಧ್ಯವಾದರೆ ಇತರೆ ಶಾಸಕರ ಬೆಂಬಲ ಪಡೆಯುವ ಬಗ್ಗೆಯೂ ವರಿಷ್ಠರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.
ಜೂನ್ 10ರಂದು ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ.