ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಜೂ.10ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಕಾಂಗ್ರೆಸ್ನ ಜಯರಾಂ ರಮೇಶ್ ಅವರಿಗೆ ಸುಲಭ ಗೆಲುವು ಸುಲಭ ಆಗಿದ್ದರೆ, ನಾಲ್ಕನೇ ಸೀಟಿಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಮತಗಳ ಲೆಕ್ಕಾಚಾರ ನೋಡಿದರೆ ಬಿಜೆಪಿ ಲೆಹರ್ ಸಿಂಗ್ಗೆ ಗೆಲುವಿನ ಸಾಧ್ಯತೆ ಹೆಚ್ಚಿದ್ದರೆ, ಜೆಡಿಎಸ್ನ ಕುಪ್ಪೇಂದ್ರ ರೆಡ್ಡಿ ಗೆಲುವು ಅಸಾಧ್ಯ ಎನ್ನಲಾಗುವುದಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವು ಬಹುತೇಕ ಅಸಾಧ್ಯ ಎನ್ನಬಹುದು.
ಸದ್ಯದ ಮತಗಳ ಲೆಕ್ಕಾಚಾರ ಹೇಗಿದೆ?: ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಇದನ್ನು ಮೊದಲ ಪ್ರಾಶಸ್ತ್ಯದ ಮತಗಳು ಎನ್ನಲಾಗುತ್ತದೆ. ಅದರಂತೆ ಬಿಜೆಪಿ ಶಾಸಕರ ಬಲ 122, ಕಾಂಗ್ರೆಸ್ ಶಾಸಕರ ಸಂಖ್ಯೆ 70 ಆಗಿದ್ದರೆ, ಜೆಡಿಎಸ್ ಶಾಸಕರ ಬಲ 32. ಆ ಪ್ರಕಾರ ಬಿಜೆಪಿಯ ಎರಡು ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗ್ಗೇಶ್ಗೆ ತಲಾ 45 ಮೊದಲ ಪ್ರಾಶಸ್ತ್ಯದ ಮತಗಳು ಲಭ್ಯವಾಗಲಿವೆ. ಅದೇ ರೀತಿ ಕಾಂಗ್ರೆಸ್ನ ಜಯರಾಂ ರಮೇಶ್ಗೆ ಮೊದಲ ಪ್ರಾಶಸ್ತ್ಯದ 45 ಮತಗಳು ಸಿಗಲಿದ್ದು, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಇತ್ತ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ. ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಕೇವಲ 32 ಇದೆ. ಜೆಡಿಎಸ್ಗೆ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆಯ ಅವಕಾಶ ಇಲ್ಲ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ನ ಒಬ್ಬ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ.
ನಾಲ್ಕನೇ ಸೀಟಿಗೆ ಮತ ಕೊರತೆ: ಈ ಬಾರಿ ರಾಜ್ಯದ ರಾಜ್ಯಸಭೆ ಕಣದಲ್ಲಿ ನಾಲ್ಕನೇ ಸೀಟಿನ ಚುನಾವಣೆ ಕೌತುಕಕ್ಕೆ ಕಾರಣವಾಗಿದೆ. ಮೂರು ಪಕ್ಷಗಳೂ ನಾಲ್ಕನೇ ಸೀಟಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆದರೆ ನಾಲ್ಕನೇ ಅಭ್ಯರ್ಥಿಗೆ ಮತಗಳ ಕೊರತೆ ಇದೆ. ಹೀಗಾಗಿ ನಾಲ್ಕನೇ ಸೀಟಿಗೆ ಕಣಕ್ಕಿಳಿದಿರುವ ಬಿಜೆಪಿಯ ಲೆಹರ್ ಸಿಂಗ್, ಕಾಂಗ್ರೆಸ್ನ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ನ ಕುಪ್ಪೇಂದ್ರ ರೆಡ್ಡಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ನಾಲ್ಕನೇ ಸೀಟಿಗಾಗಿನ ಜಿದ್ದಾಜಿದ್ದಿಯಲ್ಲಿ ಬಿಜೆಪಿಯ 122 ಮತಗಳ ಪೈಕಿ ತಲಾ 45ರಂತೆ 90 ಮತಗಳು ಇಬ್ಬರು ಅಭ್ಯರ್ಥಿಗಳ ಪಾಲಾಗಲಿವೆ. ಉಳಿಯುವ 32 ಮತಗಳು ಲೆಹರ್ ಸಿಂಗ್ ಗೆ ಹಂಚಿಕೆಯಾಗಲಿವೆ. ಇತ್ತ 70 ಮತಗಳು ಹೊಂದಿರುವ ಕಾಂಗ್ರೆಸ್ ನ 45 ಮತ ಜೈರಾಮ್ ರಮೇಶ್ ಪಾಲಾದರೆ, ಉಳಿದಿರುವ 25 ಮತಗಳು ಮನ್ಸೂರ್ ಅಲಿ ಖಾನ್ಗೆ ಹಂಚಿಕೆಯಾಗಲಿವೆ. ಜೆಡಿಎಸ್ನ ಮೊದಲ ಪ್ರಾಶಸ್ತ್ಯದ ಮತಗಳಾದ 32 ಕುಪ್ಪೇಂದ್ರ ರೆಡ್ಡಿ ಪಾಲಾಗುತ್ತವೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ತಲಾ 32 ಮೊದಲ ಪ್ರಾಶಸ್ತ್ಯದ ಮತಗಳಿವೆ. ಹೀಗಾಗಿ ಇಬ್ಬರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಫಾರ್ಮುಲಾ ಪ್ರಕಾರ ಬಿಜೆಪಿಗೆ ಮೇಲುಗೈ: ರಾಜ್ಯಸಭೆ ಮತಮೌಲ್ಯ ಫಾರ್ಮುಲಾ ಪ್ರಕಾರ ನಾಲ್ಕನೇ ಸೀಟಿನಲ್ಲಿ ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದಲ್ಲೇ ಮತಮೌಲ್ಯ ಹೆಚ್ಚಿಗೆ ಬರಲಿದ್ದು, ಲೆಹರ್ ಸಿಂಗ್ ಮೇಲುಗೈ ಸಾಧಿಸಲಿದ್ದಾರೆ.
ಮತಮೌಲ್ಯ ಫಾರ್ಮುಲಾ ಹೀಗಿದೆ: ಶಾಸಕರು ಚಲಾಯಿಸುವ ಒಂದು ಮತದ ಮೌಲ್ಯ 100 ಆಗಿದೆ. ಇಲ್ಲಿ ನಾಲ್ಕು ರಾಜ್ಯಸಭೆ ಸೀಟು ಭರ್ತಿ ಮಾಡಬೇಕಾಗಿದ್ದು, ಅದರ ಫಾರ್ಮುಲಾ ಪ್ರಕಾರ ಒಬ್ಬ ಅಭ್ಯರ್ಥಿ ಗೆಲ್ಲ ಬೇಕಾದರೆ 4481 ಮತಮೌಲ್ಯದ ಅಗತ್ಯ ಇದೆ. ಅಂದರೆ ಓರ್ವ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತದಾರರು (ಶಾಸಕರು)ಮತ ಚಲಾಯಿಸಬೇಕು. ಒಂದು ಮತದ ಮೌಲ್ಯ 100ರಂತೆ ಈ 45 ಮತಗಳ ಮೌಲ್ಯ 4,500 ಆಗಿರುತ್ತದೆ. ಆದರೆ, ರಾಜ್ಯದಲ್ಲಿನ 4 ರಾಜ್ಯಸಭೆ ಸ್ಥಾನದ ಚುನಾವಣೆಯ ಮತ ಫಾರ್ಮುಲಾದಂತೆ ಬೇಕಾಗಿರುವುದು 4,481 ಮತಮೌಲ್ಯ. ಅಂದರೆ 19 ಮತಗಳ ಮೌಲ್ಯ ಹೆಚ್ಚುವರಿಯಾಗಿ ಗೆಲುವಿನ ಅಭ್ಯರ್ಥಿಗೆ ಬಿದ್ದಂತಾಗುತ್ತದೆ.
ಇದನ್ನೂ ಓದಿ: ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡಬೇಡಿ: ಕುಮಾರಸ್ವಾಮಿ
ಆ ಹೆಚ್ಚುವರಿ 19 ಮತ ಮೌಲ್ಯವನ್ನು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಮತಕ್ಕೆ ಸೇರಿಸಲಾಗುತ್ತದೆ. ಅದನ್ನು ನಾಲ್ಕನೇ ಸ್ಥಾನದ ಅಭ್ಯರ್ಥಿ ಪರ ಹಾಕಲಾಗುವ ಮೊದಲ ಪ್ರಾಶಸ್ತ್ಯದ ಮತಕ್ಕೆ ಸೇರಿಸಲಾಗುತ್ತದೆ. ಹಾಗಿದ್ದಾಗ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ಬೀಳಲಿವೆ. ಆಗ ಎರಡನೇ ಪ್ರಾಶಸ್ತ್ಯ ಮತಗಳನ್ನು ಲೆಕ್ಕ ಹಾಕುವ ಅಗತ್ಯವೂ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ, ಜೆಡಿಎಸ್ಗೆ ಅಡ್ಡಮತದ ತೂಗುಗತ್ತಿ: ಎಲ್ಲವೂ ಅಂದುಕೊಂಡಂತೆ ಮತ ಚಲಾವಣೆ ಆದರೆ ನಾಲ್ಕನೇ ಸೀಟಿನಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ಇದೆ. ಆದರೆ ಅಡ್ಡ ಮತದಾನ ಆದರೆ ಲೆಕ್ಕಾಚಾರವೆಲ್ಲವೂ ಉಲ್ಟಾಪಲ್ಟಾ ಆಗಲಿದೆ.ನಾಲ್ಕನೇ ಸೀಟಿಗೆ ನಡೆಯಲಿರುವ ಮತದಾನದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಡ್ಡ ಮತದಾನ ಆದರೆ, ಬಿಜೆಪಿಗೆ ಗೆಲುವು ಕಷ್ಟ ಸಾಧ್ಯವಾಗಲಿದೆ. ಅದೇ ರೀತಿ ಬಿಜೆಪಿ ಅಭ್ಯರ್ಥಿ ಪರ ಅಡ್ಡ ಮತವಾದರೆ ಬಿಜೆಪಿ ಅಭ್ಯರ್ಥಿ ಗೆಲುವು ಇನ್ನಷ್ಟು ಸುಲಭವಾಗಲಿದೆ. ಎರಡು ಅಭ್ಯರ್ಥಿಗಳ ಪರ ಪ್ರಥಮ ಪ್ರಾಶಸ್ತ್ಯದ ಮತ ತಲಾ 32 ಇದೆ. ಹೀಗಾಗಿ ಅಡ್ಡ ಮತ ಆದರೆ ಎರಡೂ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಜಟಿಲವಾಗಲಿದೆ. ಹೀಗಾಗಿ ಎಲ್ಲಾ ಪಕ್ಷಗಳು ಅಡ್ಡಮತದಾನ ಆಗದಂತೆ ರಣತಂತ್ರ ರೂಪಿಸುವುದು ಅನಿವಾರ್ಯವಾಗಿದೆ.