ಬೆಂಗಳೂರು: ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ವಿಧಾನಸೌಧದ ಮೊದಲ ಮಹಡಿಯಲ್ಲಿನ ಚುನಾವಣಾ ಕೊಠಡಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಲೆಹರ್ ಸಿಂಗ್ ಹಾಗೂ ಕಾಂಗ್ರೆಸ್ನ ಜೈರಾಂ ರಮೇಶ್, ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
ಈ ಬಾರಿ ನಾಲ್ಕನೇ ಸೀಟಿಗಾಗಿ ನಡೆಯುವ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಬಿಜೆಪಿಯ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ವಿಧಾನಸೌಧದ 106ನೇ ಕೊಠಡಿಯನ್ನು ಮತದಾನ ಕೇಂದ್ರವನ್ನಾಗಿ ಮಾಡಲಾಗಿದೆ. ಅಲ್ಲಿಯೇ ಮತ ಎಣಿಕೆ ಕಾರ್ಯವೂ ನಡೆಯಲಿದೆ. ಚುನಾವಣೆಯಲ್ಲಿ ಮತ ಚಲಾಯಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನಾ ಫಲಕಗಳನ್ನು ಕೊಠಡಿ ಒಳಕ್ಕೂ, ಹೊರಕ್ಕೂ ಅಳವಡಿಸಲಾಗಿದೆ. ಎರಡು ವೋಟಿಂಗ್ ಕಂಪಾರ್ಟ್ ಮೆಂಟ್, ಮತಪೆಟ್ಟಿಗೆ, ಮೂರು ಪಕ್ಷಗಳ ಅಧಿಕೃತ ಏಜೆಂಟರಿಗೆ ಪ್ರತ್ಯೇಕ ಕೌಂಟರ್ಗಳನ್ನು ಸಿದ್ಧಪಡಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಹಾಗು ಸಂಜೆ 5 ರಿಂದ 6 ಗಂಟೆಯವರೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಸದ್ಯದ ಮತಗಳ ಲೆಕ್ಕಾಚಾರ ಹೀಗಿದೆ: ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಇದನ್ನು ಮೊದಲ ಪ್ರಾಶಸ್ತ್ಯದ ಮತಗಳು ಎನ್ನಲಾಗುತ್ತದೆ. ಅದರಂತೆ, ಬಿಜೆಪಿ ಶಾಸಕರ ಬಲ 122, ಕಾಂಗ್ರೆಸ್ ಶಾಸಕರ ಸಂಖ್ಯೆ 70 ಆಗಿದ್ದರೆ, ಜೆಡಿಎಸ್ ಶಾಸಕರ ಬಲ 32. ಆ ಪ್ರಕಾರ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗ್ಗೇಶ್ಗೆ ತಲಾ 45 ಮೊದಲ ಪ್ರಾಶಸ್ತ್ಯದ ಮತಗಳು ಲಭ್ಯವಾಗಲಿದೆ.
ಅದೇ ರೀತಿ ಕಾಂಗ್ರೆಸ್ನ ಜೈರಾಂ ರಮೇಶ್ಗೆ ಮೊದಲ ಪ್ರಾಶಸ್ತ್ಯದ 45 ಮತಗಳು ಸಿಗಲಿದ್ದು, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ. ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಕೇವಲ 32 ಇದೆ. ಜೆಡಿಎಸ್ಗೆ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆಯ ಅವಕಾಶ ಇಲ್ಲ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ ಓರ್ವ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿ, ಪ್ರಧಾನಿ; ಐಎಸ್ಡಿ, ಐಬಿ ಕಟ್ಟೆಚ್ಚರ